ಹುಡುಗಿಗಾಗಿ ... : ಶಂಭೋ ಶಿವ ಶಂಕರನ ಜತೆ ಸೋನಲ್

Shambo Shiva Shankara_ Sonal Montero
Published on

ಬೆಂಗಳೂರು: ಕರಾವಳಿ ಬೆಡಗಿ ಸೋನಲ್ ಮೊಂತೆರೋ ಇದೀಗ ಶಂಭೋ ಶಿವ ಶಂಕರನ ಧ್ಯಾನ ಮಾಡುತ್ತಿದ್ದಾರೆ. ಹಾಗಂತ ನಿಜ ಜೀವನದಲ್ಲಿ ಅಲ್ಲ. ಬದಲಿಗೆ ಸಿನಿಮಾದಲ್ಲಿ. ಅಂದರೆ, ‘ಶಂಭೋ ಶಿವ ಶಂಕರ’ ಹೊಸ ಸಿನಿಮಾ ತಂಡದೊಟ್ಟಿಗೆ ಕೈ ಜೋಡಿಸಿರುವ ಸೋನಲ್, ಆ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ.

ಅಂದಹಾಗೆ, ಈಗಾಗಲೇ ಹಲವು ಧಾರಾವಾಹಿಗಳಿಗೆ ನಿರ್ದೇಶನ ಮಾಡಿರುವ ಅನುಭವ ಇರುವ ಶಂಕರ್, ಇದೀಗ ಪೂರ್ಣ ಪ್ರಮಾಣದ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ತಯಾರಿಯಲ್ಲಿದ್ದಾರೆ. ಪಕ್ಕಾ ಲವ್ ಸ್ಟೋರಿಯ ಜತೆಗೆ ಸಾಕಷ್ಟು ಸಸ್ಪೆನ್ಸ್ ಇರುವ ಈ ಚಿತ್ರದಲ್ಲಿ, ಮೂವರು ನಾಯಕರಿಗೆ ಒಬ್ಬಳೇ ನಾಯಕಿಯಾಗಿ ಸೋನಲ್ ನಟಿಸುತ್ತಿದ್ದಾರೆ.

‘ಇಲ್ಲಿಯವರೆಗೆ ನಾನು ನಟಿಸಿದ ಸಿನಿಮಾಗಳಲ್ಲಿ ಒಬ್ಬ ನಾಯಕನಿಗಷ್ಟೇ ಹೀರೋಯಿನ್ ಆಗಿ ಕಾಣಿಸಿಕೊಂಡಿದ್ದೆ. ಇದೀಗ ‘ಶಂಭೋ ಶಿವ ಶಂಕರ’ ಚಿತ್ರದಲ್ಲಿ ಮೂವರು ನಾಯಕರಿದ್ದಾರೆ. ವಿಭಿನ್ನವಾದ ಪಾತ್ರ ಪೋಷಿಸುವ ಅವಕಾಶ ಈ ಸಿನಿಮಾದಲ್ಲಿ ಸಿಕ್ಕಿದೆ. ಹಾಗಾಗಿ ಬೇರೇನೂ ಯೋಚಿಸಿದೆ ನಟಿಸಲು ಒಪ್ಪಿಕೊಂಡೆ’ ಎಂಬುದು ಸೋನಲ್ ಮಾತು.

ಒಂದು ಹುಡುಗಿಗೋಸ್ಕರ ಮೂವರು ಹುಡುಗರು ಏನೆಲ್ಲ ಮಾಡ್ತಾರೆ, ಏನೆಲ್ಲ ಅನಾಹುತಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ ಎಂಬುದೇ ಈ ಚಿತ್ರದ ಕಥೆ. ನವ ನಟರಾದ ಅಭಯ್ ಪುನೀತ್, ರಕ್ಷಕ್, ರೋಹಿತ್ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಇತ್ತ ‘ಬನಾರಸ್’ ಮತ್ತು ‘ಬುದ್ಧಿವಂತ 2’ ಚಿತ್ರದಲ್ಲಿಯೂ ನಟಿಸಿರುವ ಸೋನಲ್, ಆ ಸಿನಿಮಾಗಳಲ್ಲಿ ತಮ್ಮ ಕೆಲಸ ಮುಗಿಸಿದ್ದು, ಅ.5ರಿಂದ ‘ಶಂಭೋ ಶಿವ ಶಂಕರ’ ಚಿತ್ರದಲ್ಲಿ ಚಿತ್ರೀಕರಣದಲ್ಲಿ ಭಾಗವಹಿಸಿಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net