ಪ್ರೊಡಕ್ಷನ್ ಹೌಸ್ ಶುರು ಮಾಡಿದ ಸೋನಲ್

Sonal
Published on

ಬೆಂಗಳೂರು: ‘ಕಳೆದ ವರ್ಷ ಚೂರು ಬಿಡುವಿಲ್ಲದೆ, ಸಿನಿಮಾ ಕೆಲಸಗಳಲ್ಲಿಯೇ ತೊಡಗಿಸಿಕೊಂಡಿದ್ದೆ. ಒಂದು ಸುದೀರ್ಘ ಬಿಡುವು ಬೇಕಿತ್ತು. ಅದು ಲಾಕ್​ಡೌನ್ ಮೂಲಕ ಸಿಕ್ಕಿತು. ಅದೇ ವೇಳೆ ನಮ್ಮ ಪ್ರೊಡಕ್ಷನ್ ಹೌಸ್ ಸಹ ಶುರುವಾಯಿತು...’- ಹೀಗೆ ಲಾಕ್​ಡೌನ್ ಅವಧಿಯಲ್ಲಿ ಒಂದಷ್ಟು ಬಿಡುವು ಪಡೆದುಕೊಂಡು, ಅದರ ಜತೆ ಪ್ರೊಡಕ್ಷನ್ ಹೌಸ್ ತೆರೆದು, ಒಂದೊಳ್ಳೆ ಕೆಲಸ ಮಾಡಿದ ಖುಷಿಯಲ್ಲಿದ್ದಾರೆ ನಟಿ ಸೋನಲ್ ಮೊಂತೆರೋ.

ಲಾಕ್​ಡೌನ್ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿಯೇ ಕಾಲ ಕಳೆದ ಸೋನಲ್, ಬಾಲ್ಯದ ಸ್ನೇಹಿತರೊಂದಿಗೆ ಬೆರೆತಿದ್ದಾರೆ. ಲಗೋರಿ, ಬ್ಯಾಡ್ಮಿಂಟನ್ ಆಡಿ ಸಮಯ ಕಳೆದಿದ್ದಾರೆ. ಅದರ ಜತೆಗೆ ಕನಸನ್ನೂ ಈಡೇರಿಸಿಕೊಂಡಿದ್ದಾರೆ. ಆ ನನಸಾದ ಕನಸನ್ನು ‘ವಿಜಯವಾಣಿ’ ಜತೆಗೆ ಹಂಚಿಕೊಂಡಿದ್ದಾರೆ.

‘ಚರಣ್ ಸುವರ್ಣ ಮತ್ತು ನಾನು ಒಟ್ಟಿಗೆ ಸೆರಿ ‘ಸೋಚ್’ ಹೆಸರಿನ ಚಿತ್ರನಿರ್ವಣ ಸಂಸ್ಥೆಯನ್ನು ತೆರೆದಿದ್ದೇವೆ. ಅದರ ಮೂಲಕ ಚೊಚ್ಚಲ ವೆಬ್ ಸಿರೀಸ್ ಸಿದ್ದಪಡಿಸಿದ್ದೇವೆ. ರವಿ ಶ್ಯಾಮನೂರ್ ಎಂಬುವವರು ಆ ವೆಬ್​ಸರಣಿಗೆ ಬಂಡವಾಳ ಹೂಡಿದ್ದು, ಶೂಟಿಂಗ್ ಸಹ ಮುಕ್ತಾಯವಾಗಿದೆ’ ಎಂದು ಮಾಹಿತಿ ನೀಡುತ್ತಾರೆ ಸೋನಲ್.

20 ನಿಮಿಷದ 6 ಏಪಿಸೋಡ್: ‘ಸೈಕೋ ಥ್ರಿಲ್ಲರ್ ಶೈಲಿಯಲ್ಲಿ ವೆಬ್​ಸಿರೀಸ್ ಮೂಡಿಬಂದಿದೆ. ಕೇವಲ ನಾಲ್ಕು ದಿನಗಳಲ್ಲಿ ರಾಮ್ೇಜ್ ನಿರ್ದೇಶನ ಮಾಡಿದ್ದಾರೆ. ‘ಅಗ್ನಿಸಾಕ್ಷಿ’ ಧಾರಾವಾಹಿ ಖ್ಯಾತಿಯ ಕಿಶೋರ್ ಮತ್ತು ಶ್ರೀಯಾ ಶೆಟ್ಟಿ ಮುಖ್ಯಭೂಮಿಕೆಯಲ್ಲಿದ್ದಾರೆ. ಬಹುತೇಕ ಚಿತ್ರೀಕರಣ ಮಂಗಳೂರಿನಲ್ಲಿ ಮಾಡಿದ್ದು, 20 ನಿಮಿಷದ ಒಟ್ಟು 6 ಏಪಿಸೋಡ್​ಗಳು ಇರಲಿವೆ’ ಎನ್ನುತ್ತಾರೆ. ಒಂದು ವೇಳೆ ವೆಬ್​ಸಿರೀಸ್ ಆಗಲಿಲ್ಲ ಅಂದರೆ, ಅದನ್ನೇ ಸಿನಿಮಾ ರೂಪದಲ್ಲಿ ಹೊರತರುವುದು ತಂಡದ ಪ್ಲಾನ್. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆದಿದ್ದು, ಜುಲೈ ಕೊನೇ ಇಲ್ಲವಾದರೆ, ಆಗಸ್ಟ್ ಮೊದಲ ವಾರದಲ್ಲಿ ಹೊರತರುವ ಯೋಜನೆ ಇದೆಯಂತೆ.

ನಿರೀಕ್ಷೆ ಈಡೇರಲಿಲ್ಲ

ಸಾಲು ಸಾಲು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದ ಸೋನಲ್​ಗೆ 2020 ಅಶಾದಾಯಕ ವರ್ಷವಾಗಿತ್ತು. ಅವರ ಬಹುನಿರೀಕ್ಷಿತ ಸಿನಿಮಾಗಳು ತೆರೆಗೆ ಬರಲು ಸಿದ್ಧವಾಗಿದ್ದವು. ಆದರೆ, ಅದ್ಯಾವುದೂ ಈಡೇರಲಿಲ್ಲ ಎಂದು ಬೇಸರದಲ್ಲಿದ್ದಾರೆ ಸೋನಲ್. ‘ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಈ ವರ್ಷ ನನ್ನ ನಾಲ್ಕು ಸಿನಿಮಾಗಳು ತೆರೆಕಾಣಬೇಕಿತ್ತು. ಆದರೆ, ಅದೆಲ್ಲದಕ್ಕೂ ಕರೊನಾ ಅಡ್ಡಿಯಾಯಿತು. ‘ರಾಬರ್ಟ್’, ‘ಬನಾರಸ್’, ‘ಬುದ್ಧಿವಂತ 2’ ಸಹ ಇದೇ ವರ್ಷ ಬಿಡುಗಡೆ ಆಗಬೇಕಿತ್ತು. ಸದ್ಯದ ಪರಿಸ್ಥಿತಿ ನೋಡಿದರೆ, ಮುಂದಿನ ವರ್ಷವೇ ರಿಲೀಸ್ ಆಗಬಹುದು ಅನಿಸುತ್ತಿದೆ’ ಎನ್ನುತ್ತಾರೆ.

ಶೀಘ್ರದಲ್ಲೇ ಪಂಜಾಬಿ ಸಿನಿಮಾದಲ್ಲಿ

ಇದಲ್ಲದೆ ಪಂಜಾಬಿ ಚಿತ್ರವೊಂದರಲ್ಲಿ ಸೋನಲ್ ನಟಿಸುತ್ತಿದ್ದಾರಂತೆ. ‘ಪಂಜಾಬಿ ಭಾಷೆಯಲ್ಲಿ ಸಿನಿಮಾದ ಕೆಲಸಗಳು ಶುರುವಾಗಿದ್ದವು. ಲಾಕ್​ಡೌನ್ ಹಿನ್ನೆಲೆಯಲ್ಲಿ ಅದರ ಬಗ್ಗೆ ಇನ್ನೂ ಹೊಸ ಅಪ್​ಡೇಟ್ ಮಾಹಿತಿ ಹೊರಬಂದಿಲ್ಲ. ಜತೆಗೆ ಹಿಂದಿ ವೆಬ್ ಸರಣಿ ಪ್ರಾಜೆಕ್ಟ್ ಮಾತುಕತೆ ಹಂತದಲ್ಲಿದ್ದು, ಇನ್ನು ಕೆಲದಿನಗಳಲ್ಲಿ ಅಂತಿಮವಾಗಲಿದೆ’ ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net