30 ಕೆಜಿ ತೂಕ ಇಳಿಸಿಕೊಂಡರೂ ಜನ ಗೇಲಿ ಮಾಡೋದು ಬಿಡಲಿಲ್ಲ!

Sonakshi Sinha Final
Published on

ಬಾಲಿವುಡ್​ನಲ್ಲಿ ತೂಕದ ವಿಷಯದಲ್ಲಿ ಯಾರಾದರೂ ಅತೀ ಹೆಚ್ಚು ಟ್ರೋಲ್​ ಆಗಿದ್ದಾರೆ ಎಂದರೆ, ಅದು ಬಹುಶಃ ಸೋನಾಕ್ಷಿ ಸಿನ್ಹಾನೇ ಇರಬೇಕು. ಸೋನಾಕ್ಷಿ ಕಾಲದಿಂದ ಕಾಲಕ್ಕೆ ತೂಕ ಇಳಿಸಿಕೊಳ್ಳುತ್ತಲೇ ಇದ್ದರೂ, ಅವರ ತೂಕ ಜಾಸ್ತಿ ಎಂದು ಗೇಲಿಗೊಳಗಾಗುತ್ತಲೇ ಇರುತ್ತಾರೆ.

ಹೀಗೆ ಗೇಲಿ ಮಾಡಿಸಿಕೊಳ್ಳೋದು, ಅವಮಾನ ಎದುರಿಸೋದು ಬಾಲ್ಯದಿಂದ ಅಭ್ಯಾಸವಾಗಿ ಬಿಟ್ಟಿದೆ ಎಂದು ಸೋನಾಕ್ಷಿ ಇತ್ತೀಚೆಗೆ ಒಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, 'ಬಾಲ್ಯದಿಂದಲೂ ನಾನು ಸ್ವಲ್ಪ ತೂಕ ಜಾಸ್ತಿಯೇ. ಶಾಲೆಯಲ್ಲಿ ಓದುವಾಗಿ 95 ಕೆಜಿ ಇದ್ದೇ. ನನ್ನ ಸಹಪಾಠಿಗಳು ನನ್ನನ್ನು ಅವಮಾನ ಮಾಡೋರು, ಏನೇನೋ ಹೆಸರುಗಳಿಂದ ಕರೆಯೋರು. ಏನಾ ಆದರೂ, ನಾನು ಅದನ್ನು ಅಷ್ಟೊಂದು ಮನಸ್ಸಿಗೆ ತೆಗೆದುಕೊಳ್ಳಲಿಲ್ಲ. ಏಕೆಂದರೆ, ತೂಕಕ್ಕಿಂತ ಜೀವನದಲ್ಲಿ ಬೇರೆ ವಿಷಯಗಳೂ ಇವೆ ಎಂಬುದನ್ನು ನನಗೆ ಅರ್ಥವಾಗಿತ್ತು' ಎಂದು ಹೇಳಿದ್ದಾರೆ.

ಇನ್ನು 'ದಬಾಂಗ್​' ಚಿತ್ರದ ಮೂಲಕ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗ, ಸುಮಾರು 30 ಕೆಜಿಯಷ್ಟು ತೂಕ ಇಳಿಸಿಕೊಂಡರಂತೆ. 'ಸಿಕ್ಕಾಪಟ್ಟೆ ದಪ್ಪಗಿದ್ದ ನನಗೆ, ಅದೇ ದೊಡ್ಡ ಸಾಧನೆ. ಆದರೆ, ಅಷ್ಟೊಂದು ತೂಕ ಇಳಿಸಿಕೊಂಡರೂ, ಜನ ನನ್ನನ್ನು ದಪ್ಪ ಅನ್ನೋದೂ ಬಿಡಲಿಲ್ಲ, ಗೇಲಿ ಮಾಡೋದು ಬಿಡಲಿಲ್ಲ. ಅಷ್ಟೊಂದು ತೂಕ ಇಳಿಸಿ, ಈ ಹಂತದವರೆಗೂ ಬರೋದು ಎಷ್ಟು ಕಷ್ಟ ಅಂತ ನನಗೆ ಮಾತ್ರ ಗೊತ್ತು. ನನ್ನನ್ನ ಗೇಲಿ ಮಾಡಿದವರ್ಯಾರು ಬಾಲಿವುಡ್​ನಲ್ಲಿ ಮಿಂಚಲಿಲ್ಲ. ನಾನೊಬ್ಬಳು ಮಾತ್ರ ಇಷ್ಟು ದೂರ ಬಂದೆ' ಎಂದು ಹೇಳಿಕೊಂಡಿದ್ದಾರೆ ಸೋನಾಕ್ಷಿ.

ಸೋನಾಕ್ಷಿ ಇಷ್ಟೆಲ್ಲಾ ಮಾತನಾಡುವುದಕ್ಕೂ ಕಾರಣವಿದೆ. ಇತ್ತೀಚೆಗೆ ಕಂಗನಾ ರಣಾವತ್​ ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಒಂದು ಪೋಸ್ಟ್​ ಹಾಕಿದ್ದರು. ಸ್ಟಾರ್ ಮಕ್ಕಳೆಲ್ಲಾ ಹಿಂದೊಮ್ಮೆ ಎಷ್ಟು ದಪ್ಪ ಇದ್ದರೂ, ಅವರಿಗೆ ಚಿತ್ರರಂಗಕ್ಕೆ ಬರುವುದಕ್ಕೆ, ಇಲ್ಲಿ ಗೆಲ್ಲುವುದಕ್ಕೆ ಅಷ್ಟು ಕಷ್ಟವಾಗಲಿಲ್ಲ ಎಂದು ಹೇಳಿಕೊಂಡಿದ್ದರು. ಈ ಮೂಲಕ, ಬಾಲಿವುಡ್​ನಲ್ಲಿ ಸ್ವಜನಪಕ್ಷಪಾತ ಹೇಗೆ ಕೆಲಸ ಮಾಡುತ್ತದೆ ಎಂದು ಹೇಳಿದ್ದರು.

ಇದಕ್ಕೆ ಉತ್ತರವಾಗಿ ಬಾಲಿವುಡ್​ನ ಹಲವು ಸ್ಟಾರ್ ಮಕ್ಕಳು ಮಾತನಾಡಿದ್ದರು. ಈಗ ಸೋನಾಕ್ಷಿ ಸಹ, ತಾವು ನಡೆದು ಬಂದ ಹಾದಿಯ ಅನುಭವವನ್ನು ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net