ಸಲ್ಮಾನ್​ ವಾರದ ಸಂಭಾವನೆ ಎಷ್ಟು ಗೊತ್ತಾ? ... ಕೇಳಿದ್ರೆ ಶಾಕ್​ ಆಗೋದು ಗ್ಯಾರಂಟಿ

Big Boss - Final
Published on

ಕರೊನಾ ಮತ್ತು ಲಾಕ್​ಡೌನ್​ನಿಂದ ಕಿರುತೆರೆಯ ರಿಯಾಲಿಟಿ ಶೋಗಳೆಲ್ಲಾ ಶುರುವಾಗುವುದೇ ಸಂಶಯ ಎಂಬ ವಾತಾವಾರಣವಿರುವಾಗ, 'ಬಿಗ್​ ಬಾಸ್​'ನ 14ನೇ ಸೀಸನ್​ ಶುರುವಾಗುವ ಮುನ್ಸೂಚನೆ ಸಿಕ್ಕಿದೆ. ಈಗಾಗಲೇ ತೆರೆಮರೆಯಲ್ಲಿ ಕೆಲಸಗಳು ಶುರುವಾಗಿದ್ದು, ಎಲ್ಲಾ ಅಂದುಕೊಂಡಂತೆ ಆದರೆ, ಅಕ್ಟೋಬರ್​ ಕೊನೆಯ ವಾರದಿಂದ, 'ಬಿಗ್​ ಬಾಸ್​' ಶುರುವಾಗಲಿದೆ ಎಂದು ಹೇಳಲಾಗುತ್ತಿದೆ.

'ಬಿಗ್​ ಬಾಸ್' ಶುರುವಾದಾಗಿನಿಂದಲೂ, ಬಹಳಷ್ಟು ಸೀಸನ್​ಗಳನ್ನು ನಡೆಸಿಕೊಡುತ್ತಿರುವುದು ಸಲ್ಮಾನ್​. ಈ ಬಾರಿಯೂ ಸಲ್ಮಾನ್​ ಅವರೇ ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಅವರನ್ನು ಕಾರ್ಯಕ್ರಮದ ನಿರ್ಮಾಪಕರು ಭೇಟಿ ಮಾಡಿದ್ದು, ಪ್ರಸ್ತಾವನೆ ಮುಂದಿಟ್ಟಿದ್ದಾರಂತೆ. ಸಲ್ಮಾನ್​ ಏನೋ ಕಾರ್ಯಕ್ರಮ ನಡೆಸಿಕೊಡುವುದಕ್ಕೆ ತಯಾರು. ಆದರೆ, ಈ ಬಾರಿ ಅವರು ತಮ್ಮ ಸಂಭಾವನೆಯನ್ನು ಹೆಚ್ಚಿಸಿದ್ದಾರಂತೆ.

ಸಲ್ಮಾನ್​ ಖಾನ್​ 'ಬಿಗ್​ ಬಾಸ್​' ಕಾರ್ಯಕ್ರಮವನ್ನು ನಡೆಸಿಕೊಡುವುದಕ್ಕೆ ಇದಕ್ಕೂ ಮುನ್ನ, ಅಂದರೆ ಕಳೆದ ಸೀಸನ್​ನಲ್ಲಿ ವಾರಕ್ಕೆ 12ರಿಂದ 14 ಕೋಟಿ ಸಂಭಾವನೆ ಪಡೆಯುತ್ತಿದ್ದರಂತೆ. ಈ ಬಾರಿ, ಅದನ್ನು ಇನ್ನಷ್ಟು ಏರಿಸಿರುವ ಅವರು, ವಾರಕ್ಕೆ 16 ಕೋಟಿ ಡಿಮ್ಯಾಂಡ್​ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಸಲ್ಮಾನ್​ ಖಾನ್​ ಅವರ ಹೊಸ ಸಂಭಾವನೆ ಕೇಳಿ ಕಾರ್ಯಕ್ರಮದ ನಿರ್ಮಾಪಕರು ಸುಸ್ತಾಗಿದ್ದಾರೆ. ಏಕೆಂದರೆ, ಇದುವರೆಗೂ ಭಾರತೀಯ ರಿಯಾಲಿಟಿ ಶೋಗಳ ಇತಿಹಾಸದಲ್ಲೇ ಯಾರೂ ಸಹ ಇಷ್ಟೊಂದು ಮೊತ್ತದ ಸಂಭಾವನೆಯನ್ನು ಇದುವರೆಗೂ ತೆಗೆದುಕೊಂಡಿಲ್ಲ. ಸಲ್ಮಾನ್​ ಈ ಡಿಮ್ಯಾಂಡ್​ ಇಟ್ಟಿರುವುದನ್ನು ನೋಡಿ, ಆಯೋಜಕರು ಸಹಜವಾಗಿಯೇ ದಂಗಾಗಿದ್ದಾರೆ.

ಆದರೆ, ಚಾನಲ್​ ಅಥವಾ ಕಾರ್ಯಕ್ರಮ ನಿರ್ಮಾಪಕರಿಗೆ ಬೇರೆ ದಾರಿ ಇಲ್ಲ. ಏಕೆಂದರೆ, 'ಬಿಗ್​ ಬಾಸ್​'ನ ನಿಜವಾದ ಬಲವೇ ಸಲ್ಮಾನ್​ ಖಾನ್​ ಎಂದು ಎಲ್ಲರಿಗೂ ಗೊತ್ತಿದೆ. ಹಾಗಾಗಿ ಅವರನ್ನು ಬಿಡುವಂತೆಯೂ ಇಲ್ಲ. ಹಾಗೆಯೇ, ಅವರ ಡಿಮ್ಯಾಂಡ್​ ಒಪ್ಪುವುದಕ್ಕೆ ಸಾಧ್ಯವಿಲ್ಲ ಎನ್ನುವಂತಹ ಪರಿಸ್ಥಿತಿ ಇದೆ. ಆದರೂ ಈ ಬಾರಿ ಅವರೇ ಕಾರ್ಯಕ್ರಮವನ್ನು ಮುಂದುವರೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇನ್ನು ಈಗಾಗಲೇ ಆನ್​ಲೈನ್​ ಮೂಲಕ ಆಡಿಷನ್​ಗಳನ್ನು ನಡೆಸಲಾಗುತ್ತಿದ್ದು, 16 ಜನರ ಪೈಕಿ 13 ಸೆಲೆಬ್ರಿಟಿಗಳಿದ್ದರೆ, ಮೂರು ಜನ ಸಾಮಾನ್ಯರು ಇರಲಿದ್ದಾರಂತೆ. ಈಗಾಗಲೃ 'ನಾಗಿನ್​ 4' ಖ್ಯಾತಿಯ ಜಾಸ್ಮಿನ್​ ಭಾಸಿನ್​, ಆಕಾಂಕ್ಷ ಪುರಿ ಮುಂತಾದವರು ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net