

ಬಾಲಿವುಡ್ನಲ್ಲಿ ಚಾಲ್ತಿಯಲ್ಲಿರುವ ನೆಪೋಟಿಸಂ ಕುರಿತಾಗಿ ಕಂಗನಾ ರಣಾವತ್ ಹಲವರ ಕಾಲೆಳೆದಿದ್ದಾರೆ. ಕರಣ್ ಜೋಹರ್, ಸೋನಾಕ್ಷಿ ಸಿನ್ಹಾ, ಆಲಿಯಾ ಭಟ್ ಸೇರಿದಂತೆ ಹಲವರ ಬಗ್ಗೆ ಸಾಕಷ್ಟು ಮಾತನಾಡಿದ್ದಾರೆ.
ಆದರೆ, ಯಾರೊಬ್ಬರೂ ಇದುವರೆಗೂ ಕಂಗನಾಗೆ ಕೌಂಟರ್ ಕೊಡುವುದಕ್ಕೆ ಹೋಗಿರಲಿಲ್ಲ. ತಾವಾಯಿತು, ತಮ್ಮ ಪಾಡಾಯಿತು ಎಂದು ಎಲ್ಲರೂ ಸುಮ್ಮನಿದ್ದುಬಿಟ್ಟಿದ್ದರು. ಆದರೆ, ಇದೀಗ ಸೋನಾಕ್ಷಿ ಸಿನ್ಹಾ ಮೊದಲ ಬಾರಿಗೆ ನೆಪೋಟಿಸಂ ವಿಷಯದಲ್ಲಿ ಕಂಗನಾಗೆ ಟಾಂಗ್ ಕೊಟ್ಟಿದ್ದಾರೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, 'ನನಗೆ ಇದೆಲ್ಲಾ ಬಹಳ ವಿಚಿತ್ರ ಎಂದನಿಸುತ್ತದೆ. ಈ ನೆಪೋಟಿಸಂ ಚರ್ಚೆ ಶುರು ಮಾಡಿದವರು, ತಮ್ಮ ಕಂಪೆನಿಯ ಜವಾಬ್ದಾರಿಯನ್ನು ಅವರ ಸಹೋದರಿಗೆ ಕೊಟ್ಟಿದ್ದಾರೆ. ಹೊರಗಿನವರಿಗೆ ಅಂಥದ್ದೊಂದು ಅವಕಾಶವನ್ನು ಅವರು ಕೊಡಬಹುದಿತ್ತು. ಆದರೆ, ಸಹೋದರಿಗೆ ಕೊಟ್ಟಿದ್ದೇಕೆ?' ಎಂದು ಕಂಗನಾ ಹೆಸರನ್ನು ಹೇಳದೆಯೇ ಟಾಂಗ್ ಕೊಟ್ಟಿದ್ದಾರೆ ಸೋನಾಕ್ಷಿ.
'ಇನ್ನು ನಾನು ಸಹ ನೆಪೋಟಿಸಂನಿಂದ ಚಿತ್ರರಂಗದಲ್ಲಿದ್ದೇನೆ ಎಂದು ಬಹಳ ದಿನಗಳಿಂದ ಚರ್ಚೆಯಾಗುತ್ತಿದೆ. ನಮ್ಮ ಕುಟುಂಬಕ್ಕೆ ಸಲ್ಮಾನ್ ಖಾನ್ ಅವರ ಕುಟುಂಬ ಚೆನ್ನಾಗಿ ಪರಿಚಯವಿತ್ತು. ಅವರು 'ದಬಾಂಗ್' ಸಿನಿಮಾ ಶುರು ಮಾಡಿದಾಗ, ಒಂದು ಹೊಸ ಮುಖ ಹುಡುಕುತ್ತಿದ್ದರಂತೆ. ನನ್ನನ್ನು ನೋಡಿ, ಆ ರೋಲ್ಗೆ ಫಿಟ್ ಆಗುತ್ತೇನೆ ಎಂಬ ಕಾರಣಕ್ಕೆ ಅವಕಾಶ ಕೊಟ್ಟಿದ್ದಾರೆಯೇ ಹೊರತು, ನಮ್ಮಪ್ಪ ಯಾವತ್ತೂ ಯಾರಿಗೂ ಫೋನ್ ಮಾಡಿ ನನಗೆ ಅವಕಾಶ ಕೊಡಿ ಎಂದು ಕೇಳಿಲ್ಲ' ಎಂದು ಅವರು ಹೇಳಿಕೊಂಡಿದ್ದಾರೆ.
ಇನ್ನು ನೆಪೋಟಿಸಂ ಬಗ್ಗೆ ಮಾತನಾಡಿರುವ ಅವರು, 'ಅನವಶ್ಯಕವಾಗಿ ಅನನ್ಯ ಪಾಂಡೆ, ಆಲಿಯಾ ಭಟ್, ಜಾಹ್ನವಿ ಕಪೂರ್, ಸೋನಮ್ ಕಪೂರ್ ಅವರನ್ನು ಎಳೆದು ತರಲಾಗುತ್ತಿದೆ. ಇದರಿಂದ ಅವರ ಮನಸ್ಸಿನ ಮೇಲೆ ಅದೆಷ್ಟು ಘಾಸಿಯಾಗುತ್ತಿರಬಹುದು ಯೋಚನೆ ಮಾಡಿ. ಅವರು ಎಷ್ಟೇ ಸ್ಟ್ರಾಂಗ್ ಆಗಿದ್ದರೂ, ಎಲ್ಲೋ ಒಂದು ಕಡೆ ನೋವಾಗದೇ ಇರುವುದಿಲ್ಲ. ಇಷ್ಟಕ್ಕೂ ಈ ಯಾವ ನಟಿಯರನ್ನೂ ಅವರ ಮನೆಯವರು ಪರಿಚಯಿಸಿಲ್ಲ. ಬೇರೆ ಯಾರೋ ಪರಿಚಯಿಸಿದ್ದಾರೆ' ಎಂದು ಹೇಳಿದ್ದಾರೆ.