

ಸೋನಾಕ್ಷಿ ಸಿನ್ಹಾಗೆ ಸಿಕ್ಕಾಪಟ್ಟೆ ಬೇಸರವಾದಂತಿದೆ. ಈ ಲಾಕ್‌ಡೌನ್‌ನಲ್ಲಿ ಮನೇಲಿದ್ದೂ ಇದ್ದೂ ಬೇಸರ ಬಂದಿದೆಯಾ ಎಂಬ ಪ್ರಶ್ನೆ ಬರಬಹುದು. ಹಾಗೇನಿಲ್ಲ, ಲಾಕ್‌ಡೌನ್ ಸಮಯವನ್ನು ಮನೆಯವರೊಂದಿಗೆ ಎಂಜಾಯ್ ಮಾಡುತ್ತಿರುವ ಸೋನಾಕ್ಷಿಗೆ ಬೇಸರ ಇರೋದು ಜನ ಅವರನ್ನು ಟ್ರೋಲ್ ಮಾಡುತ್ತಿರುವುದಕ್ಕೆ.
ಇದನ್ನೂ ಓದಿ: ಟ್ರಿಕ್ ಫೋಟೋಗ್ರಫಿ ತಜ್ಞ ಶ್ರೀಕಾಂತ್ ಇನ್ನಿಲ್ಲ
ಸೋನಾಕ್ಷಿ ಇತ್ತೀಚೆಗೆ ಎಲ್ಲೂ ಕಾಣಿಸಿಕೊಂಡಿಲ್ಲ, ಯಾವುದೇ ವಿವಾದ ಮಾಡಿಕೊಂಡಿಲ್ಲ, ವಿವಾದಾತ್ಮಕ ಹೇಳಿಕೆಗಳನ್ನೂ ಕೊಟ್ಟಿಲ್ಲ ... ಹಾಗಿರುವಾಗ ಅವರು ಟ್ರೋಲ್ ಆಗುತ್ತಿರುವುದೇಕೆ ಎಂದರೆ ಅದಕ್ಕೊಂದು ಫ್ಲಾಶ್ಬ್ಯಾಕ್ಗೆ ಹೋಗಬೇಕು. ಸುಮಾರು ಏಳೆಂಟು ತಿಂಗಳುಗಳ ಹಿಂದೆ ಒಮ್ಮೆ ‘ಕೌನ್ ಬನೇಗಾ ಕರೋಡ್‌ಪತಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ, ಸೋನಾಕ್ಷಿ ಒಂದು ಎಡವಟ್ಟು ಮಾಡಿಕೊಂಡಿದ್ದರು. ಹನುಮಂತ ಯಾರಿಗೆ ಸಂಜೀವಿನ ಪರ್ವತ ತಂದ ಎಂಬ ಪ್ರಶ್ನೆಗೆ ತಬ್ಬಿಬ್ಬಾಗಿದ್ದರು. ಉತ್ತರಕ್ಕಾಗಿ ಲೈಫ್ಲೈನ್ ಬಳಸಿದ್ದರು. ಅಲ್ಲಿಂದ ಸೋಷಿಯಲ್ ಮೀಡಿಯಾದಲ್ಲಿ ಅವರನ್ನು ಯಾವ ಪರಿ ಟ್ರೋಲ್ ಮಾಡಲಾಗುತ್ತಿದೆಯೆಂದರೆ, ಈಗಲೂ ಅದು ನಿಂತಿಲ್ಲ. ಈಗಲೂ ಸೋನಾಕ್ಷಿ ಮತ್ತು ಸಂಜೀವಿನಿ ಪರ್ವತದ ಜೋಕುಗಳು ಆಗಾಗ ಕೇಳಿ ಬರುತ್ತಲೇ ಇವೆ.
ಈ ಕುರಿತು ಇತ್ತೀಚೆಗೆ ಮಾತನಾಡಿರುವ ಅವರು, ಒಂದು ಸಣ್ಣ ತಪ್ಪಿಗೆ ಇನ್ನೂ ಅದೆಷ್ಟು ಆಡ್ಕೋತೀರಪ್ಪಾ ಎಂದು ಟ್ರೋಲಿಗರಿಗೆ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ‘ಭಾರತದ ಕೋಗಿಲೆ’ಯಾಗಿ ‘ರಾಮಾಯಣ’ದ ಸೀತೆ!
‘ರೂಮಾ ದೇವಿ ಎಂಬುವವರ ಜತೆ ನಾನು ಆಡ್ತಿದ್ದೆ. ಈ ಸಂಜೀವಿನಿ ಪರ್ವತದ ಬಗ್ಗೆ ಒಂದು ಪ್ರಶ್ನೆ ಬಂತು. ಆ ಕ್ಷಣಕ್ಕೆ ಯಾಕೋ ಮೈಂಡ್ ಬ್ಲಾಕ್ ಆಯ್ತು. ಚಿಕ್ಕಂದಿನಿಂದ ರಾಮಾಯಣವನ್ನು ಓದಿ ಬೆಳೆದಿದ್ದರೂ, ಆ ಕ್ಷಣಕ್ಕೆ ಯಾಕೋ ನೆನಪಾಗಲಿಲ್ಲ. ಬಹುಶಃ ಇದು ಎಲ್ಲರಿಗೂ ಒಂದಲ್ಲ ಒಂದು ಹಂತದಲ್ಲಿ ಆಗುತ್ತದೆ. ವಿಷಯ ಗೊತ್ತಿದ್ದರೂ, ಸಡನ್ ಆಗಿ ಒಮ್ಮೆ ಕೇಳಿದರೆ, ಹೇಳುವುದಕ್ಕೆ ಆಗುವುದಿಲ್ಲ. ನನಗೂ ಅದೇ ಆಯ್ತು. ಅದು ಇಷ್ಟೊಂದು ಸುದ್ದಿಯಾಗುತ್ತದೆ ಅಂತ ಗೊತ್ತಿರಲಿಲ್ಲ. ಇನ್ನೂ ಆಶ್ಚರ್ಯ ಅಂದ್ರೆ, ಆ ಘಟನೆ ಆಗಿಯೇ ಏಳೆಂಟು ತಿಂಗಳಾಗಿವೆ. ಆದರೆ, ಜನ ಇನ್ನೂ ಟ್ರೋಲ್ ಮಾಡ್ತಲೇ ಇದ್ದಾರೆ. ಒಂದು ಸಣ್ಣ ತಪ್ಪಿಗೆ ಇಷ್ಟೆಲ್ಲಾ ಮಾಡುವುದನ್ನು ನೋಡಿದರೆ ಬೇಸರ ಆಗ್ತದೆ’ ಎಂದು ಸೋನಾಕ್ಷಿ ಹೇಳಿಕೊಂಡಿದ್ದಾರೆ.
ಜನ ಒಂದು ಸಣ್ಣ ತಪ್ಪಿಗೆ ತಮ್ಮನ್ನು ಟ್ರೋಲ್ ಮಾಡ್ತಿದ್ದಾರೆಯೇ ಹೊರತು, ಅಂದು ಗೆದ್ದ ದುಡ್ಡಿನ ಬಗ್ಗೆ ಯಾರೂ ಮಾತಾಡುತ್ತಲೇ ಇಲ್ಲ. ರಾಮಾಯಣದಲ್ಲಿ ರಾಮನ ಬಗ್ಗೆ ಕಲಿಯುವುದಕ್ಕೆ ಸಾಕಷ್ಟಿದೆ. ಆತ ಹೇಗೆ ಒಬ್ಬ ಒಳ್ಳೆಯ ಮಗನಾಗಿದ್ದ, ಗಂಡನಾಗಿದ್ದ, ಮನುಷ್ಯನಾಗಿದ್ದ ಎಂಬ ಹಲವು ಅಂಶಗಳಿವೆ. ಅದೆಲ್ಲವನ್ನೂ ಬಿಟ್ಟು, ಜನ ನನ್ನ ತಪ್ಪನ್ನು ತೋರಿಸುತ್ತಾ ಕೂತಿದ್ದಾರೆ. ಈ ಬಗ್ಗೆ ನಾನು ಪ್ರತಿಕ್ರಿಯೆ ಕೊಡುವುದನ್ನೇ ಬಿಟ್ಟಿದ್ದೇನೆ’ ಎಂದು ಸೋನಾಕ್ಷಿ ಹೇಳಿದ್ದಾರೆ.