

ಮುಂಬೈ: ಬಿಕಿನಿ ತೊಟ್ಟು ಪೋಸ್ ನೀಡಿದ್ದ ಪೋಟೋಗಳನ್ನು ಶೇರ್ ಮಾಡಿದ್ದಕ್ಕೆ ಟ್ರೋಲ್ಗೆ ಗುರಿಯಾಗಿಸಿದ ನೆಟ್ಟಿಗರಿಗೆ ಇಂದು ಬೆಳಗ್ಗೆ ಮತ್ತಷ್ಟು ಫೋಟೋಗಳನ್ನು ಹರಿಬಿಡುವ ಮೂಲಕ ಬಾಲಿವುಡ್ ಗಾಯಕಿ ಹಾಗೂ ಸಂಗೀತ ಸಂಯೋಜಕಿ ಸೋನಾ ಮೊಹಾಪಾತ್ರ ತಿರುಗೇಟು ನೀಡಿದ್ದಾರೆ.
ವರ್ಷಾಚರಣೆಗೂ ಮುನ್ನ ಪ್ರವಾಸ ಮೂಡ್ನಲ್ಲಿರುವ ಸೋನಾ ಕಪ್ಪು ಬಣ್ಣದ ಬಿಕಿನಿ ಧರಿಸಿ ಸಮುದ್ರ ದಂಡೆಯಲ್ಲಿ ಕ್ಯಾಮರಾಗೆ ಪೋಸ್ ನೀಡಿದ್ದ ಫೋಟೋಗಳನ್ನು ಸೋಮವಾರ ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದರು. ಅದನ್ನು ನೋಡಿದ ಕೆಲ ನೆಟ್ಟಿಗರು ಸೋನಾರನ್ನು ತರಾಟೆಗೆ ತೆಗೆದುಕೊಂಡು ಈ ರೀತಿ ಪ್ರಚೋದಾನಾಕಾರಿ ಉಡುಪು ಧರಿಸಬಾರದು. ಈ ರೀತಿ ಧರಿಸಿ, ಬಳಿಕ ಮೀಟೂ ಎಂದು ಅಳುವುದು ಸರಿಯಲ್ಲ ಎಂದಿದ್ದರು. ಇನ್ನು ಕೆಲವರು ಅವರು ನಿಂತಿರುವ ಭಂಗಿ ಕುರಿತು ಆಕ್ಷೇಪವನ್ನೂ ವ್ಯಕ್ತಪಡಿಸಿದ್ದರು.
ಇದೀಗ ಸೋನಾ, ಮತ್ತಷ್ಟು ಬಿಕಿನಿ ಪೋಟೋಗಳನ್ನು ಶೇರ್ ಮಾಡಿ ಟ್ರೋಲಿಗರಿಗೆ ತಿರುಗೇಟು ನೀಡಿದ್ದಾರೆ. ಕಳೆದ ಸಂಜೆ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದೆ. ಪ್ರಚೋದನಾಕಾರಿ ಉಡುಗೆ ಧರಿಸಿ ಆಮೇಲೆ ಮೀಟೂ ಎನ್ನುತ್ತಾರೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಲವರು ಹೃದಯ ಮತ್ತು ಬೆಂಕಿಯ ಎಮೋಜಿ ಕಳುಹಿಸಿದ್ದಾರೆ. ನಾನು ಚೆನ್ನಾಗಿ ಸಂಪಾದಿಸಿದ ಹೊಟ್ಟೆಯನ್ನು ಹೀರಲು ನಿರಾಕರಿಸಿದಂತೆಯೇ ನಾನು ಯಾವುದೇ ಪೆಟ್ಟಿಗೆಗೆ ಹೊಂದಿಕೊಳ್ಳಲು ನಿರಾಕರಿಸುತ್ತೇನೆ ಎಂದು ವ್ಯಂಗ್ಯವಾಗಿ ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.
ಮಾಜಿ ಬಿಗ್ಬಾಸ್ ಸ್ಪರ್ಧಿ ಸಪ್ನಾ ಭವಾನಿ ಕೂಡ ಹೆಸರು ಹೇಳದೇ ಸೋನಾ ವಿರುದ್ಧ ಟ್ವೀಟ್ ಮಾಡಿ, ಅರೆಬರೆ ಬಟ್ಟೆ ಧರಿಸುವುದನ್ನು ಸ್ತ್ರೀ ಸ್ವಾತಂತ್ರ್ಯ ಎಂದು ಭಾವಿಸಿದ್ದಾರೆ. ಮುಂದಿನ ವರ್ಷದಲ್ಲಾದರೂ ಹೊಸ ದೃಷ್ಟಿಕೋನವನ್ನು ನೋಡಲು ಬಯಸುತ್ತೇನೆ ಎಂದಿದ್ದರು. ಇದಕ್ಕೂ ತಿರುಗೇಟು ನೀಡಿರುವ ಸೋನಾ, ಬಹುಶಃ ನೀವು ಬಂದಂತಹ ಪ್ರದೇಶದಲ್ಲಿ ಇನ್ನು ಹೆಚ್ಚಿನ ಸೌಕರ್ಯಗಳಿಂದ ನೀವು ಬೆಳೆಯಬೇಕಿದೆ. ಜನರು ತಮಗನಿಸಿದ್ದನ್ನು ಮಾಡಲು ಬಿಡಿ. ನಿಮ್ಮದನ್ನು ನೀವು ನೋಡಿಕೊಳ್ಳಿ ಎಂದಿದ್ದಾರೆ. ಆದರೆ, ತಾವು ಮಾಡಿದ ಟ್ವೀಟ್ ನಿಮಗೆ ಅನ್ವಯಿಸುವುದಿಲ್ಲ ಎಂದು ಸಪ್ನಾ ಮರುಟ್ವೀಟ್ ಮಾಡಿದ್ದಾರೆ.
ಅಂದಹಾಗೆ ಸೋನಾ ಮೀಟೂ ಅಭಿಯಾನದ ವೇಳೆಯೂ ಗಮನ ಸೆಳೆದಿದ್ದರು. ಸಂಗೀತ ಕ್ಷೇತ್ರದಲ್ಲಿ ಅನು ಮಲಿಕ್ ಮತ್ತು ಕೈಲಾಶ್ ಖೇರ್ ಸೇರಿದಂತೆ ಅನೇಕ ಪ್ರಮುಖ ವ್ಯಕ್ತಿಗಳ ಹೆಸರನ್ನು ಹೇಳುವ ಮೂಲಕ ಸುದ್ದಿಯಾಗಿದ್ದರು. (ಏಜೆನ್ಸೀಸ್)