

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ರನ್ನು ಮದುವೆಯಾಗುವುದನ್ನೇ ನನ್ನ ಜೀವನದ ಏಕೈಕ ಗುರಿಯಾಗಿತ್ತು ಎಂದು ಬಾಲಿವುಡ್ನ ಮಾಜಿ ನಟಿಯೊಬ್ಬರು ಹೇಳಿದ್ದಾರೆ. ನನಗೆ ನಟಿಯಾಗುವ ಆಸೆಯೇ ಇರಲಿಲ್ಲ, ಆದರೆ ಸಲ್ಮಾನ್ರನ್ನು ಮದುವೆಯಾಗಬೇಕೆನ್ನುವ ಕಾರಣಕ್ಕೇ ನಟನೆಗೆ ಇಳಿದೆ ಎಂದು ಆಕೆ ಹೇಳಿಕೊಂಡಿದ್ದಾರೆ.
ಈ ರೀತಿಯ ಹೇಳಿಕೆ ಕೊಟ್ಟಿರುವುದು ಬಾಲಿವುಡ್ನಲ್ಲಿ ಮಿಂಚಿ ಮರೆಯಾದ ನಟಿ ಸೋಮಿ ಅಲಿ. 1991ರಲ್ಲಿ ಬಾಲಿವುಡ್ ಬದುಕನ್ನು ಆರಂಭಿಸಿದ್ದ ಆಕೆ 1992ರಲ್ಲಿ ಸಲ್ಮಾನ್ ಖಾನ್ ಜತೆ ಡೇಟಿಂಗ್ ಮಾಡಿದ್ದರು ಕೂಡ. ಅವರ ಮೂಲ ಉದ್ದೇಶದ ಕುರಿತಾಗಿ ಇದೀಗ ಬಾಯಿಬಿಟ್ಟಿದ್ದಾರೆ.
ಸೋಮಿ ಪಾಕಿಸ್ತಾನದ ಕರಾಚಿಯಲ್ಲಿ ಹುಟ್ಟಿದಾಕೆ. ಆಕೆಯ ತಾಯಿ ಇರಾನ್ ಮೂಲದವರಾದರೆ ತಂದೆ ಪಾಕಿಸ್ತಾನದವರಂತೆ. ಸೋಮಿಗೆ 12 ವರ್ಷವಿರುವಾಗ ಆಕೆಯ ತಾಯಿ ಮಗ ಮತ್ತು ಮಗಳನ್ನು ಕರೆದುಕೊಂಡು ಹೋಗಿಒ ಫ್ಲೋರಿಡಾದಲ್ಲಿ ವಾಸವಾರಂಭಿಸಿದರು. 16 ವರ್ಷದವರಾಗಿದ್ದಾಗ ಆಕೆ ಮೈನೆ ಪ್ಯಾರ್ ಕಿಯಾ ಸಿನಿಮಾ ನೋಡಿದರಂತೆ. ಆಗ ಅವರಿಗೆ ಸಲ್ಮಾನ್ ಖಾನ್ ಮೇಲೆ ಪ್ರೀತಿ ಹುಟ್ಟಿತಂತೆ. ತಕ್ಷಣ ತಾಯಿ ಬಳಿ ಹೋಗಿ, ನಾನು ಸಲ್ಮಾನ್ನನ್ನೇ ಮದುವೆಯಾಗುವುದು, ಅದಕ್ಕೆಂದೇ ನಾನು ಭಾರತಕ್ಕೆ ಹೋಗಲಿದ್ದೇನೆ ಎಂದು ಹೇಳಿದರಂತೆ.
ತಂದೆಗೆ ಕರೆ ಮಾಡಿ, ಮುಂಬೈನಲ್ಲಿರುವ ಸಂಬಂಧಿಕರನ್ನು ಭೇಟಿ ಮಾಡಲೆಂದು ಭಾರತಕ್ಕೆ ಹೋಗುತ್ತೇನೆಂದರಂತೆ.
ಅದರಂತೆ 16ನೇ ವಯಸ್ಸಿಗೆ ಮುಂಬೈಗೆ ಸಲ್ಮಾನ್ ಕನಸು ಕಟ್ಟಿಕೊಂಡು ಬಂದ ಸೋಮು ಮೊದಲಿಗೆ ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡರು. ನಂತರ ಬಾಲಿವುಡ್ಗೆ ಎಂಟ್ರಿ ಕೊಟ್ಟು, ಸಲ್ಮಾನ್ರೊಂದಿಗೆ ಸ್ನೇಹ ಬೆಳೆಸಿಕೊಂಡರು. ಬಾಲಿವುಡ್ನಲ್ಲಿ 1991ರಿಂದ 1998ರವರೆಗೆ ಸಕ್ರಿಯವಾಗಿದ್ದ ಆಕೆ, ಆಂಥ್ (1994) ಕ್ರಿಶನ್ ಅವತಾರ್ (1993) ಮತ್ತು ಅಯೋ ಪ್ಯಾರ್ ಕರೆನ್ (1994) ಸೇರಿ ಅನೇಕ ಸಿನಿಮಾಗಳಲ್ಲಿ ಕಾಣಿಸಿಕೊಂಡರು. 1994ರಲ್ಲಿ ಸಲ್ಮಾನ್ ಮತ್ತು ಸೋಮಿ ನಡುವಿನ ಸಂಬಂಧ ಹಳಸಿತ್ತು. ಇದರಿಂದ ಬೇಸರಗೊಂಡ ಆಕೆ ಬಾಲಿವುಡ್ಗೆ ಬೈ ಹೇಳಿ, ಅಮೆರಿಕಕ್ಕೆ ತೆರಳಿ ವಿದ್ಯಾಭ್ಯಾಸ ಮುಂದುವರಿಸಿದರು.
ನಾನು ಸಿನಿಮಾ ಕ್ಷೇತ್ರಕ್ಕೆ ಒಗ್ಗುವವಳೇ ಅಲ್ಲ. ಸಲ್ಮಾನ್ಗಾಗಿ ನಾನು ಅಲ್ಲಿ ಬರಬೇಕಾಯಿತಷ್ಟೇ ಎಂದು ಆಕೆ ಇತ್ತೀಚೆಗೆ ಹೇಳಿಕೊಂಡಿದ್ದಾರೆ.(ಏಜೆನ್ಸೀಸ್)