

ಮುಂಬೈ: ಬಾಲಿವುಡ್ನ ಹಾಟ್ ಕಪಲ್ 'ವಿಕತ್ರಿನಾ' ಇಂದು ತಮ್ಮ ಮದುವೆಯ ಮತ್ತಷ್ಟು ರಸಮಯ ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ಅಗ್ನಿಯ ಸುತ್ತಲ ಏಳು ಸುತ್ತುಗಳ ಚಿತ್ರಗಳಾದವು, ಅರಿಶಿನ ಶಾಸ್ತ್ರದ್ದಾದವು, ಇದೀಗ ಮೆಹೆಂದಿ ಸಮಾರಂಭದ ಸರದಿ. ವಿಕಿ ಕೌಶಲ್ ಮತ್ತು ಕತ್ರೀನಾ ಕೈಫ್ ಮೆಹೆಂದಿ ಸಮಾರಂಭದಲ್ಲಿ ಮನಬಿಚ್ಚಿ ನರ್ತಿಸಿರುವ ದೃಶ್ಯಗಳನ್ನು ತಂತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಕತ್ರಿನಾರ ಕೈಗಳಿಗೆ ಇಬ್ಬರು ಕಲಾವಿದರು ಮೆಹೆಂದಿ ಹಾಕುತ್ತಿರುವಾಗ ವಿಕಿ, ಅವರ ಕಾಲುಗಳ ಮೇಲೆ ಒರಗಿರುವುದು, ಮತ್ತೆ ನೃತ್ಯದ ನಡುವೆ ಕೈಯಲ್ಲಿ ಹೂವುಗಳನ್ನು ಹಿಡಿದು ಮಂಡಿಯೂರಿ ಬಾಲಿವುಡ್ ಸ್ಟೈಲ್ನಲ್ಲಿ ಕತ್ರಿನಾಗೆ ಪ್ರಪೋಸ್ ಮಾಡುತ್ತಿರುವುದು, ಇಬ್ಬರೂ ಜೋಡಿಯಾಗಿ ಹಾಡಿಗೆ ಹೆಜ್ಜೆ ಹಾಕಿರುವುದು - ಹೀಗೆ ಹಲವಾರು ವಿಶೇಷ ಕ್ಷಣಗಳ ಆಕರ್ಷಕ ಚಿತ್ರಗಳನ್ನು ನಾವು ಕಾಣಬಹುದು. 'ವಿಕತ್ರಿನಾ'ರ ಕೆಮಿಸ್ಟ್ರಿ ಕಾಣುತ್ತಿರುವ ಈ ಚಿತ್ರಗಳು ಭಾರೀ ವೇಗದಲ್ಲಿ ವೈರಲ್ ಆಗುತ್ತಿವೆ.
ಇನ್ನು, ಕತ್ರಿನಾ, ವಿಕಿ ತಂದೆ ಹಾಗೂ ತಮ್ಮ ಮಾವ ಶಾಂ ಕೌಶಲ್ರೊಂದಿಗೆ ಡ್ಯಾನ್ಸ್ ಮಾಡುತ್ತಿರುವುದು, ವಿಕಿ-ಕತ್ರಿನಾರನ್ನು ಸಂಬಂಧಿಕರು ಹೆಗಲುಗಳ ಮೇಲಕ್ಕೆತ್ತಿ ಕೂರಿಸಿಕೊಂಡಿರುವುದು, ವಿಕಿ ಸೋದರನೊಂದಿಗೆ ಬಾಂಗ್ರಾ ಮಾಡುತ್ತಿರುವುದು, ಸುಂದರವಾದ ಲೆಹಂಗಾ-ಚೋಲಿಯಲ್ಲಿ ಸಜ್ಜಾಗಿರುವ ಕತ್ರೀನಾ ಹೂನಗೆ ಸೂಸಿರುವುದು - ಹೀಗೆ ಇನ್ನೂ ಅನೇಕ ಚಿತ್ರಗಳು ಹೈಬಜೆಟ್ ಸಿನಿಮಾ ದೃಶ್ಯಗಳಂತೆ ಗಮನ ಸೆಳೆದಿವೆ. (ಏಜೆನ್ಸೀಸ್)