

ಹಾಲಿವುಡ್ ಸಿನಿಮಾ ಅಥವಾ ವೆಬ್ಸರಣಿಗಳನ್ನು ನೋಡುವವರಿಗೆ ಈ ವಾರಾಂತ್ಯದಲ್ಲಿ ಹಬ್ಬದ ವಾತಾವರಣ ಎಂದರೆ ತಪ್ಪಿಲ್ಲ. ಏಕೆಂದರೆ, ಈ ವಾರ ಚಿತ್ರಮಂದಿರಗಳಲ್ಲಿ ಮತ್ತು ಒಟಿಟಿಯಲ್ಲಿ ಐದು ಹೊಸ ಚಿತ್ರಗಳು ಮತ್ತು ಕಾರ್ಯಕ್ರಮಗಳು ನೋಡುಗರಿಗೆ ಸಿಗುತ್ತಿವೆ. ಮಾರ್ವೆಲ್ನ ಮೊದಲ ಸೂಪರ್ ಹೀರೋ ಚಿತ್ರ ‘ಶಾಂಗ್-ಚೀ ಆಂಡ್ ದಿ ಲೆಜೆಂಡ್ ಆಫ್ ದಿ ಟೆನ್ ರಿಂಗ್ಸ್’ ಮತ್ತು ‘ಫಾಸ್ಟ್ ಆಂಡ್ ಫ್ಯೂರಿಯಸ್ 9’ ಚಿತ್ರಗಳು ಈಗಾಗಲೇ ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿವೆ. ಇಂಗ್ಲೀಷ್ ಜತೆಗೆ ಹಿಂದಿ, ತೆಲುಗು, ತಮಿಳು, ಕನ್ನಡ ಭಾಷೆಗಳಲ್ಲೂ ಬಿಡುಗಡೆಯಾಗಿವೆ.
ಇತ್ತ ಅಮೆಜಾನ್ ಪ್ರೖೆಂನಲ್ಲಿ ‘ಸಿಂಡ್ರೆಲಾ’ ಮತ್ತು ಡಿಸ್ನಿ ಹಾಟ್ಸ್ಟಾರ್ನಲ್ಲಿ ‘ಬ್ಲಾಕ್ ವಿಡೋ’ ಚಿತ್ರಗಳು ಬಿಡುಗಡೆಯಾಗಿವೆ. ಬಹುನಿರೀಕ್ಷಿತ ‘ಮನೀ ಹೀಸ್ಟ್’ ವೆಬ್ಸರಣಿಯ ಐದನೇ ಸೀಸನ್ನ ಮೊದಲ ಭಾಗವು ನೆಟ್ಫ್ಲಿಕ್ಸ್ನಲ್ಲಿ ಶುಕ್ರವಾರದಿಂದ ಸ್ಟ್ರೀಮ್ ಆಗುತ್ತಿದ್ದು, ಎರಡನೆಯ ಭಾಗವು ಇದೇ ವರ್ಷದ ಡಿಸೆಂಬರ್ ಮೂರರಿಂದ ಸ್ಟ್ರೀಮ್ ಆಗಲಿದೆ.