ವಿನಯ್​ಗೆ ಮನುಷ್ಯತ್ವ ಇಲ್ಲ ಅನ್ನೋದಾದ್ರೆ ಇವರು ಮಾಡಿದ್ದು ಸರಿನಾ? ಸಂಗೀತಾ ವಿರುದ್ಧವೂ ಆಕ್ರೋಶ!

Vinay Gowda Sangeetha
Published on

ಬೆಂಗಳೂರು: ಭರಪೂರ ಮನರಂಜನೆಯ ಜೊತೆಗೆ ವಿವಾದಗಳನ್ನು ಹುಟ್ಟು ಹಾಕುವ ಬಿಗ್​ಬಾಸ್​, ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದೆಂದರೆ ತಪ್ಪಾಗಲಾರದು. ಪ್ರೀತಿ, ಸ್ನೇಹ ಸಂಬಂಧಗಳಿಗೆ ಈ ಶೋ ಬೆಸುಗೆಯಾಗುತ್ತದೆ. ಇಲ್ಲಿ ನಗು, ಕಣ್ಣೀರು, ಕೋಪ, ಮುನಿಸು ಮತ್ತು ಮನಸ್ತಾಪಗಳ ಮಿಶ್ರಣವು ಇದೆ. ಟಾಸ್ಕ್​ ನೀಡುವುದರ ಜೊತೆಗೆ ಜೀವನದ ಪಾಠವನ್ನು ಹೇಳಲಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ವಾರದ ಕೊನೆಯಲ್ಲಿ ಬಾದ್​ಷಾ ಕಿಚ್ಚ ಸುದೀಪರ ಪಂಚಾಯಿತಿಯಲ್ಲಿ ಸರಿ-ತಪ್ಪುಗಳ ತಿದ್ದುವಿಕೆ ಶೋಗೆ ಹೊಸ ಆಯಾಮವನ್ನು ತಂದುಕೊಡುತ್ತದೆ. ಈ ಎಲ್ಲ ಕಾರಣಗಳಿಂದ ಈ ಶೋ ವಿಶೇಷ ಎನಿಸಿಕೊಂಡಿದ್ದು, ಕಿರುತೆರೆ ಲೋಕದಲ್ಲಿ ಸಿಕ್ಕಾಪಟ್ಟೆ ಜನಪ್ರಿಯ ಪಡೆದುಕೊಂಡಿದೆ.

ಕಳೆದ ಸೀಸನ್​ಗಳಿಗೆ ಹೋಲಿಸಿದರೆ ಈ ಬಾರಿ ಮನೆಯೊಳಗೆ ತೀವ್ರ ಪೈಪೋಟಿ ಇದೆ. ಅದರಲ್ಲೂ ಈ ಬಾರಿ ಮನರಂಜನೆಗಿಂತ ಬರೀ ಕಿತ್ತಾಟವೇ ಇದೆ. ಈ ಕಾರಣಕ್ಕೆ ಪ್ರಸಕ್ತ ಆವೃತ್ತಿಯ ಬಿಗ್​ಬಾಸ್​ ತುಂಬಾ ಚರ್ಚೆಯ ವಿಷಯವಾಗಿದೆ. ಈ ಟಾಸ್ಕ್​ಗಳು ಸಹ ಉರಿಯುವ ಬೆಂಕಿಗೆ ತುಪ್ಪು ಸುರಿಯುವಂತಿದೆ. ಈ ವಾರ ನೀಡಿದ ರಾಕ್ಷಸರು ಮತ್ತು ಗಂಧರ್ವ ಟಾಸ್ಕ್​ ಬಿಗ್​ಬಾಸ್​ ಮನೆಯಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿ ಮಾಡಿದೆ.

ಚೇರ್ ಆಫ್ ಥಾರ್ನ್ಸ್ ಟಾಸ್ಕ್ ಪ್ರಕಾರ ಕುರ್ಚಿ ಮೇಲೆ ಕುಳಿತ ನಾಲ್ವರು ಗಂಧರ್ವರ ಪೈಕಿ ಇಬ್ಬರನ್ನು ರಾಕ್ಷಸರು ಎಬ್ಬಿಸಬೇಕಿತ್ತು. ವರ್ತೂರ್​ ಸಂತೋಷ್​, ವಿನಯ್​ ಹಾಗೂ ನಮ್ರತಾ ಅವರ ತಂಡ ರಾಕ್ಷಕರಾಗಿದ್ದರು. ಸಂಗೀತಾ, ಕಾರ್ತಿಕ್​ ಮತ್ತು ಡ್ರೋನ್​ ಪ್ರತಾಪ್​ ತಂಡದವರು ಗಂಧರ್ವರಾಗಿದ್ದರು. ಆದಷ್ಟು ಬೇಗ ಕುರ್ಚಿ ಮೇಲಿದ್ದವರನ್ನು ಎಬ್ಬಿಸಬೇಕು ಅಂತ ವಿನಯ್, ಮೈಕಲ್, ವರ್ತೂರು ಸಂತೋಷ್ ಅವರು ಸೋಪು ಬೆರೆಸಿದರ ನೀರನ್ನು ನಿರಂತರವಾಗಿ ಗಂಧರ್ವರ ತಂಡಕ್ಕೆ ಹೊಡೆದಿತ್ತು. ಕುರ್ಚಿಯ ಮೇಲೆ ಕುಳಿತಿದ್ದ ಸಂಗೀತಾ ಸೋಪು ನೀರಿನ ಹೊಡೆತ ತಾಳಲಾರದೇ ಆರಂಭದಲ್ಲಿ ಕೂಗಿಕೊಂಡರು. ಆದರೂ, ರಕ್ಕಸರು ನಿಲ್ಲಿಸಲಿಲ್ಲ. ಕೊನೆಗೆ ಸಂಗೀತಾ ಕುರ್ಚಿಯಿಂದ ಎದ್ದರು. ಪ್ರತಾಪ್ ಅವರಿಗೆ ಸೋಪು ನೀರನ್ನು ಹೊಡೆಯಲಾಯಿತು. ಇದರಿಂದ ಹಾನಿಗೊಳಗಾದ ಸಂಗೀತಾ ಮತ್ತು ಪ್ರತಾಪ್​ರನ್ನು ತಕ್ಷಣ ಆಸ್ಟತ್ರೆಗೆ ರವಾನಿಸಲಾಯಿತು.

ಇದಾದ ಬಳಿಕ ವಿನಯ್​ ತಂಡ ಮತ್ತು ಬಿಗ್​ಬಾಸ್​ ವಿರುದ್ಧ ಆಕ್ರೋಶದ ಮಾತುಗಳು ಕೇಳಿಬಂದವು. ಅದರಲ್ಲೂ ವಿನಯ್​ ತಂಡದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾದವು. ಆದರೆ, ಜಾಲತಾಣದಲ್ಲಿ ಒಂದು ವರ್ಗ ವಿನಯ್​ ತಂಡವನ್ನು ಸಮರ್ಥಿಸಿಕೊಂಡಿದೆ. ವಿನಯ್ ತಂಡದವರು ಮನುಷ್ಯತ್ವ ಇಲ್ಲದೇ ಆಡಿದ್ರು ಅನ್ನೋದನ್ನ ಒಪ್ಪಿಕೊಳ್ಳೋಣ! ಆದರೆ, ಡಿಟೆರ್ಜೆಂಟ್​ ಬಳಸುವುದಕ್ಕೆ ಮೊದಲು ಹುರಿದುಂಬಿಸಿದ್ದು ಯಾರು? ಕ್ಯಾಪ್ಟನ್​ ಆಗಿದ್ದ ಸ್ನೇಹಿತ್ ನಿಧಾನ ಮಾಡಿ ಎಂದಾಗ ಆಗಲ್ಲ ಅಂತ ನಿರಾಕರಿಸಿದ್ದು ಯಾರು? ನಾವು ಪವಿ ಅವ್ರಿಗೂ ನ್ಯಾಯ ಕೇಳೋಣ್ವಾ? ಎಂದು ನೆಟ್ಟಿಗರು ಧ್ವನಿ ಎತ್ತಿದ್ದಾರೆ. ಸಂಗೀತಾ ತಂಡದಿಂದಲೂ ತಪ್ಪಾಗಿದೆ ಎಂದಿದ್ದಾರೆ.

ವಿನಯ್​ ತಂಡ ರಕ್ಕಸರಾಗುವ ಮುಂಚೆ ಸಂಗೀತಾ ತಂಡ ರಕ್ಕಸರಾಗಿದ್ದರು. ಈ ವೇಳೆ ವಿನಯ್​ ತಂಡದಲ್ಲಿದ್ದ ಪವಿ ಪೂವಪ್ಪಗೆ ಸಂಗೀತಾ ತಂಡ ಡಿಟೆರ್ಜೆಂಟ್​, ಉಪ್ಪು ನೀರು ಬಳಸಿದ್ದರು. ಹತ್ತಿರದಿಂದಲೇ ಬೀಸಿ ಬೀಸಿ ಹೊಡೆಯುವಾಗ ಮಧ್ಯ ಬಂದ ಸ್ನೇಹಿತ್​, ಆ ರೀತಿ ಹೊಡೆಯುವಾಗಿಲ್ಲ ಎಂದು ತಡೆಯಲು ಯತ್ನಿಸಿದರು. ಆದರೆ, ನಿಲ್ಲಿಸದೇ ಸಂಗೀತಾ ಮತ್ತು ಅವಿನಾಶ್​​ ನೀರನ್ನು ಪವಿ ಪೂವಪ್ಪ ಮುಖಕ್ಕೆ ಹೊಡೆದಿದ್ದರು. ಇದನ್ನು ನೋಡುತ್ತಾ ಕುಳಿತ್ತಿದ್ದ ವಿನಯ್​ ಮತ್ತು ನಮ್ರತಾ ಕೂಡ ಈ ಬಗ್ಗೆ ಚರ್ಚೆ ಮಾಡಿದ್ದರು.

ಇದೀಗ ಇದೇ ವಿಡಿಯೋ ಶೇರ್​ ಮಾಡಿಕೊಂಡು ವಿನಯ್​ ಪರ ಸಾಮಾಜಿಕ ಜಾಲತಾಣದಲ್ಲಿ ಕೆಲ ನೆಟ್ಟಿಗರು ಧ್ವನಿ ಎತ್ತಿದ್ದು, ಸಂಗೀತಾ ತಂಡವನ್ನು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಕೆಲ ನೆಟ್ಟಿಗರ ಸಂಗೀತಾ ಪರ ಬ್ಯಾಟ್​ ಬೀಸಿದ್ದಾರೆ. ಪರ-ವಿರೋಧ ಚರ್ಚೆಯ ಕಾರಣದಿಂದ ಸಾಮಾಜಿಕ ಜಾಲತಾಣದಲ್ಲಿ ಬಿಗ್​ಬಾಸ್​ ಶೋ ಟಾಕ್​ ಆಫ್​ ದಿ ಟೌನ್​ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net