

ಬೆಂಗಳೂರು: ‘ಇರುವುದನ್ನು ಇದೇ ಎಂದೇ ಹೇಳಿಕೊಳ್ಳಬೇಕು. ನನಗೆ ಹೊಟ್ಟೆ ಇದೆ. ಹಾಗಂತ ಎಷ್ಟು ಅಂತ ಅದನ್ನು ಒಳಗೆ ಎಳೆದುಕೊಳ್ಳಲು ಸಾಧ್ಯ?’- ಹೀಗೆ ನಗುವಿನ ಗುಳಿಗೆ ಹಾಕಿಯೇ ‘ಲವ್ ಮಾಕ್ಟೇಲ್ 2’ ತಂಡಕ್ಕೆ ಶುಭಕೋರಿದರು ‘ಕ್ರೇಜಿ ಸ್ಟಾರ್’ ರವಿಚಂದ್ರನ್. ‘ಡಾರ್ಲಿಂಗ್’ ಕೃಷ್ಣ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ ಈ ಸಿನಿಮಾ ಇಂದು (ಫೆ. 11) ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಈ ಸಂಭ್ರಮವನ್ನು ಹಂಚಿಕೊಳ್ಳುವುದಕ್ಕೆ ಚಿತ್ರತಂಡ ಇತ್ತೀಚೆಗೆ ಒಂದು ಇವೆಂಟ್ ಆಯೋಜಿಸಿತ್ತು ಮತ್ತು ರವಿಚಂದ್ರನ್ ಅವರನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಪ್ರತಿಯೊಬ್ಬರ ಜೀವನದಲ್ಲಿ ವೀಕ್ನೆಸ್ಗಳಿರುತ್ತವೆ. ಆ ವೀಕ್ನೆಸ್ಗಳನ್ನು ಎಂಜಾಯ್ ಮಾಡಬೇಕು. ಅದನ್ನು ಇನ್ನೊಬ್ಬ ಗುರುತಿಸುವ ಮುನ್ನವೇ, ನಾವೇ ಶಕ್ತಿಯಾಗಿ ಬದಲಾಯಿಸಿಕೊಳ್ಳಬೇಕು. ಸೋಲೆಂಬ ಪದ ನಮ್ಮ ಬಾಯಿಂದ ಬಂದರೆ ಮಾತ್ರ ಸೋಲು. ಅದು ಬರದಂತೆ ನೋಡಿಕೊಳ್ಳಬೇಕು. ನೋವಿದ್ದಾಗಲೇ ನಗುವಿನ ಮೌಲ್ಯ ಗೊತ್ತಾಗುತ್ತದೆ. ಅದು ಈ ಸಿನಿಮಾದಲ್ಲಿಯೂ ಕಾಣಿಸುತ್ತದೆ’ ಎಂದೂ ಹೇಳಿದರು. ನಟ ಕೃಷ್ಣ ಹಳೆಯದನ್ನು ನೆನಪಿಸಿಕೊಂಡರು. ಅತ್ತು ಹಗುರಾದರು.
‘ನನ್ನ ಸಿನಿಮಾ ಕೆರಿಯರ್ ಡೆಡ್ ಎಂಡ್ನಲ್ಲಿತ್ತು. ಇತ್ತ ಆರೇಳು ವರ್ಷದ ಪ್ರೀತಿ. ಅವಳಿಗೋಸ್ಕರವಾದ್ರೂ ಏನಾದರೂ ಮಾಡಬೇಕೆಂದು ನಿರ್ಧರಿಸಿದಾಗ, ‘ಲವ್ ಮಾಕ್ಟೇಲ್’ ಶುರುವಾಯಿತು. ಅಪ್ಪನ ಹತ್ತಿರ 4 ಲಕ್ಷ ಸಾಲ ಪಡೆದೆ. ಮಿಲನಾ ಸಹ ಜತೆಗೆ ನಿಂತಳು. ಕಡಿಮೆ ಖರ್ಚಿನಲ್ಲಿ ಸಿನಿಮಾ ಮಾಡಬೇಕಿತ್ತು. ನಾನೇ ನಿರ್ದೇಶಕ, ಕೊನೆಗೆ ನಾನೇ ಸ್ಟಂಟ್ ಮಾಸ್ಟರ್ ಆಗಿ ಕೆಲಸ ಮಾಡಿದೆ. ಸಿನಿಮಾ ಬಿಡುಗಡೆ ಆಯಿತು. ಚೆನ್ನಾಗಿದ್ದರೂ, ಚಿತ್ರಮಂದಿರಲಲ್ಲಿ ನಿಲ್ಲಲಿಲ್ಲ. ಆತ್ಮಹತ್ಯೆಗೆ ನಿರ್ಧರಿಸಿದೆ. ಆಗ ಮಿಲನಾ ಮುಖ ಕಣ್ಮುಂದೆ ಬಂದಿತು. ದೇವರಿಗೇ ಚಾಲೆಂಜ್ ಹಾಕಿ ಕೊನೆಗೆ ಗೆಲುವು ದಕ್ಕಿಸಿಕೊಂಡೆ ...’ ಹೀಗೆ ಹಳೆಯ ಕಥೆಯನ್ನು ಹೇಳಿದ ಕೃಷ್ಣ, ಹೊಸ ‘ಮಾಕ್ಟೇಲ್’ ಪ್ರೇಕ್ಷಕರಿಗೆ ಮನರಂಜನೆಯಲ್ಲಿ ಮೋಸ ಮಾಡುವುದಿಲ್ಲ ಎಂದರು.
ಈ ವಾರ ಒಟ್ಟು ಏಳು ಚಿತ್ರ ತೆರೆಗೆ: ಇಂದು ‘ಲವ್ ಮಾಕ್ಟೇಲ್ 2’ ಜತೆಗೆ ‘ಫೋರ್ ವಾಲ್ಸ್’, ‘ಒಪ್ಪಂದ’, ‘ಮಹಾ ರೌದ್ರಂ’, ‘ಪ್ರೀತಿಗಿಬ್ಬರು’, ‘ಇದೇ ಅಂತರಂಗ ಶುದ್ಧಿ’, ‘ರೌಡಿ ಬೇಬಿ’ ಚಿತ್ರಗಳೂ ತೆರೆಕಾಣುತ್ತಿವೆ.