

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಡಾನ್ಸರ್ ಆಗಿ ಗುರುತಿಸಿಕೊಂಡು, ರಂಗಭೂಮಿಯಲ್ಲಿ ಕಲಿತು, ಕಳೆದ ಹತ್ತು ವರ್ಷಗಳಿಂದ ಕಿರುತೆರೆಯಲ್ಲಿ ಮಿಂಚುತ್ತಿರುವ ನಟ ಸಿದ್ದು ಮೂಲಿಮನಿ ಇದೀಗ ಬೆಳ್ಳಿತೆರೆಯಲ್ಲಿ ಬಿಜಿಯಾಗಿದ್ದಾರೆ. ‘ಬಣ್ಣದ ಬುಗುರಿ’, ‘ಅನುರಾಗ ಸಂಗಮ’, ‘ಒಂದೂರಲ್ಲಿ ರಾಜ ರಾಣಿ’, ‘ಕೃಷ್ಣ ತುಳಸಿ’, ‘ಪಾರು’ ಹೀಗೆ ಸಾಲು ಸಾಲು ಸೀರಿಯಲ್ಗಳಲ್ಲಿ ನಟಿಸಿರುವ ಸಿದ್ದು, ‘ರಂಗಿತರಂಗ’, ‘ವಿಕ್ರಾಂತ್ ರೋಣ’, ‘ಧಮಾಕಾ, ‘ಧರಣಿ ಮಂಡಲ ಮಧ್ಯದೊಳಗೆ’, ‘ಖೆಯೋಸ್’ ಸಿನಿಮಾಗಳಲ್ಲಿ ಮಿಂಚಿದ್ದಾರೆ. ಕೆಲ ದಿನಗಳ ಹಿಂದೆ ತೆರೆಗೆ ಬಂದ ‘ಓ’ ಅವರು ನಾಯಕನಾಗಿ ನಟಿಸಿದ ಮೊದಲ ಚಿತ್ರ.
ಇದೀಗ ಸಿನಿಮಾಗಳತ್ತ ಹೆಚ್ಚು ಗಮನ ಹರಿಸಿರುವ ಅವರು, ನಾಲ್ಕು ಚಿತ್ರಗಳಲ್ಲಿ ನಟಿಸಿದ್ದಾರೆ. ‘‘ಅಭಿರಾಮಚಂದ್ರ’ ರಿಲೀಸ್ಗೆ ರೆಡಿಯಿದೆ. ಬೆಂಗಳೂರಲ್ಲಿ ಕ್ಯಾಬ್ ಡ್ರೈವರ್ ಆಗಿರುವ ಮಂಡ್ಯ ಹುಡುಗನ ಪಾತ್ರದಲ್ಲಿ ನಟಿಸಿದ್ದೇನೆ. ‘ಹ್ಯಾಪಿ ಬರ್ತ್ಡೇ ಟು ಮಿ’ ಚಿತ್ರದಲ್ಲಿ ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ‘ಅಜ್ಞಾತವಾಸಿ’ ಚಿತ್ರದಲ್ಲಿ 18 ವರ್ಷದ ಟೀನೇಜ್ ಹುಡುಗನಾಗಿ, ‘ಗೊಂಬೆ ರಾಮ’ ಎಂಬ ನೈಜ ಘಟನೆಯಾಧಾರಿತ ಸಿನಿಮಾದಲ್ಲಿ ಚಿಕ್ಕಮಗಳೂರಿನ ಹಳ್ಳಿಯ ತಮಟೆ ಬಾರಿಸುವ ಹುಡುಗನ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಜತೆಗೆ ‘ಓಮ್ನಿ’ ಚಿತ್ರವೂ ರಿಲೀಸ್ ಆಗಬೇಕಿದೆ. ಹಾಗೇ ಇನ್ನೊಂದು ಹೊಸ ಚಿತ್ರ ಮುಂದಿನ ತಿಂಗಳೂ ಘೋಷಣೆಯಾಗಲಿದೆ’ ಎಂದು ಮಾಹಿತಿ ನೀಡುತ್ತಾರೆ ಸಿದ್ದು.
ವಿಶೇಷ ಅಂದರೆ ಅವರು ಇದುವರೆಗೆ ನಟಿಸಿರುವ ಎಲ್ಲ ಚಿತ್ರಗಳಲ್ಲೂ ಭಿನ್ನ, ವಿಭಿನ್ನ ಪಾತ್ರದಲ್ಲಿ ಮಿಂಚಿದ್ದಾರೆ. ‘ಪ್ರತಿ ಪಾತ್ರಕ್ಕೂ ಹೊಸತನ ತರಬೇಕು ಎಂಬುದು ನನ್ನ ಆಸೆ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ’ ಎನ್ನುತ್ತಾರೆ ಸಿದ್ದು.