

ಹತ್ತನೇ ಸೈಮಾ (ಸೌತ್ ಇಂಡಿಯಾ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್) ಈ ಬಾರಿ ಬೆಂಗಳೂರಿನಲ್ಲಿ ಆಯೋಜನೆಯಾಗಿತ್ತು. ದಕ್ಷಿಣ ಭಾರತದ ನಾಲ್ಕು ಚಿತ್ರರಂಗಗಳ ಅರ್ಹರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಯಿತು.ಈ ಸಮಾರಂಭದಲ್ಲಿ ದಕ್ಷಿಣ ಭಾರತದ ತಾರೆಯರ ಜತೆಗೆ ಬಾಲಿವುಡ್ ನಟ ರಣವೀರ್ ಸಿಂಗ್ ಕೂಡ ‘ದಕ್ಷಿಣ ಭಾರತೀಯರ ನೆಚ್ಚಿನ ಬಾಲಿವುಡ್ ನಟ’ ಪ್ರಶಸ್ತಿ ಪಡೆಯಲು ಬಂದಿದ್ದರು. ಆದರೆ, ರೆಡ್ ಕಾರ್ಪೆಟ್ಗೆ ಆಗಮಿಸಿದ ರಣವೀರ್ಅನ್ನು ನೋಡಿ, ಅವರ ಜತೆ ಸೆಲ್ಪಿ ಕ್ಲಿಕ್ಕಿಸಿಕೊಳ್ಳಲು ಜನ ಮುಗಿಬಿದ್ದಿದ್ದಾರೆ.
ಈ ವೇಳೆ ನೂಕಾಟ ಹೆಚ್ಚಾಗಿ ಬೌನ್ಸರ್ ಹೊಡೆದರೋ ಅಥವಾ ಅಭಿಮಾನಿಗಳೇ ಬೀಸಿದರೋ ಗೊತ್ತಿಲ್ಲ. ಆದರೆ, ನಟ ರಣವೀರ್ ಸಿಂಗ್ಗೆ ಕಾಣದ ಕೈಯೊಂದು ಕಪಾಳಮೋಕ್ಷ ಮಾಡಿದೆ. ಇದರಿಂದ ಕೆಲ ಕ್ಷಣ ವಿಚಲಿತರಾದಂತೆ ಕಂಡ ರಣವೀರ್, ನಂತರ ಸುಧಾರಿಸಿಕೊಂಡು ಎಂದಿನಂತೆ ನಗುಮೊಗದೊಂದಿಗೆ ವೇದಿಕೆಗೆ ಬಂದು ಶಿವರಾಜಕುಮಾರ್ ಮತ್ತು ವಿಜಯ್ ದೇವರಕೊಂಡ ಜತೆ ಕುಣಿದು ಸಂಭ್ರಮಿಸಿದರು.
ಫಿಲಂಫೇರ್ ವೇದಿಕೆಯಲ್ಲಿ ರಣವೀರ್ ಭಾವುಕ!: ಇನ್ನು ಇತ್ತೀಚೆಗಷ್ಟೇ ಫಿಲಂಫೇರ್ ಪ್ರಶಸ್ತಿ ಪಡೆಯುವಾಗ ವೇದಿಕೆಯ ಮೇಲೆ ಕಣ್ಣೀರು ಹಾಕಿದ್ದಾರೆ. ‘83’ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಣವೀರ್, ‘ನನ್ನ ಜೀವನದಲ್ಲಿ ಈಗ ಏನೆಲ್ಲಾ ಆಗುತ್ತಿದೆಯೋ ಅದನ್ನು ಕನಸಿನಲ್ಲೂ ಊಹಿಸಿರಲಿಲ್ಲ. ನಾನಿಂದು ಏನೇ ಆಗಿದ್ದರೂ ಅದಕ್ಕೆ ನನ್ನ ಪಾಲಕರು. ನಾನೇನೇ ಮಾಡಿದರೂ ಅದು ದೇವರಿಗಾಗಿ, ನಾನೇನೇ ಆಗಿದ್ದರೂ ಅದು ದೇವರಿಂದಾಗಿ. ನಮ್ಮ ಮನೆಯಲ್ಲಿ ಲಕ್ಷ್ಮೀ ಇದ್ದಾಳೆ. ಆಕೆಯೇ ನನ್ನ ಯಶಸ್ಸಿಗೆ ಕಾರಣ’ ಎಂದು ಪತ್ನಿ ದೀಪಿಕಾ ಪಡುಕೋಣೆಯನ್ನು ವೇದಿಕೆಗೆ ಕರೆತಂದು, ಅಪ್ಪಿ ಮುತ್ತಿಟ್ಟರು. -ಏಜೆನ್ಸೀಸ್