

ಬೆಂಗಳೂರು: ಬಯೋಪಿಕ್ಗಳಿಗೆ ವಿಶೇಷ ಸ್ಥಾನಮಾನವಿದೆ. ಕ್ರೀಡಾಪಟುಗಳು, ಸ್ವಾತಂತ್ರ್ಯ ಹೋರಾಟಗಾರರ ಜೀವನಾಧಾರಿತ ಚಿತ್ರಗಳು ಹಲವಾರು ಬಂದಿವೆ. ಆದರೆ, ಉದ್ಯಮದಲ್ಲಿ ಸಾಧನೆ ಮಾಡಿರುವ, ಸಮಾಜಕ್ಕೆ, ದೇಶದ ಆರ್ಥಿಕತೆಗೆ ತಮ್ಮದೇ ರೀತಿಯಲ್ಲಿ ಕೊಡುಗೆಗಳನ್ನು ನೀಡಿರುವ ಸಾಧಕರ ಬಗ್ಗೆ ಬಯೋಪಿಕ್ಗಳು ಆಗಿರುವುದು ತೀರಾ ವಿರಳ. ಅಂತಹ ಸಾಲಿನಲ್ಲಿ ನಿಲ್ಲುವ ಚಿತ್ರ ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಜೀವನಾಧಾರಿತ ‘ವಿಜಯಾನಂದ’. ಕನ್ನಡಿಗರು,
ಕನ್ನಡದ ಸಾಧಕನ ಕುರಿತು ನಿರ್ವಿುಸಿರುವ ಮಟ್ಟ ಮೊದಲ ಪ್ಯಾನ್ ಇಂಡಿಯಾ ಚಿತ್ರವಿದು. ನಾಳೆ ವಿಶ್ವಾದ್ಯಂತ ತೆರೆಗೆ ಬರಲು ರೆಡಿಯಿದೆ. ಇದೇ ಖುಷಿಯಲ್ಲಿ ನಟಿ ಸಿರಿ ಪ್ರಹ್ಲಾದ್ ವಿಜಯವಾಣಿ ಜತೆ ಮಾತಿಗೆ ಸಿಕ್ಕರು. ಅವರಿಲ್ಲಿ ಡಾ. ವಿಜಯ ಸಂಕೇಶ್ವರ ಪತ್ನಿ ಶ್ರೀಮತಿ ಲಲಿತಾ ಸಂಕೇಶ್ವರ ಪಾತ್ರದಲ್ಲಿ ನಟಿಸಿದ್ದಾರೆ. ‘ನನ್ನ ತಂದೆ ‘ವಿಜಯವಾಣಿ’ ಪತ್ರಿಕೆಯಲ್ಲಿ ‘ವಿಜಯಾನಂದ’ ಚಿತ್ರದ ಘೋಷಣೆ ಕುರಿತು ಓದಿ, ನನಗೆ ತಿಳಿಸಿದರು. ಸಣ್ಣ ಪಾತ್ರವಾದರೂ ಸರಿಯೇ ನಾನು ಈ ಚಿತ್ರದಲ್ಲಿ ಕೆಲಸ ಮಾಡಲೇಬೇಕೆಂದು ತೀರ್ವನಿಸಿ, ತಕ್ಷಣ ಚಿತ್ರತಂಡವನ್ನು ಸಂರ್ಪಸಿದೆ. ಕೆಲವು ದಿನಗಳ ಬಳಿಕ ಲಲಿತಾ ಮೇಡಂ ಪಾತ್ರಕ್ಕಾಗಿ ಲುಕ್ ಟೆಸ್ಟ್ಗೆ ಕೆಲವು ಫೋಟೋಗಳನ್ನು ಕಳುಹಿಸಲು ತಿಳಿಸಿದರು. ನಾನು ಫೋಟೋ ಕಳಿಸಿದ ಕೆಲವು ದಿನಗಳ ನಂತರ ಆಡಿಷನ್ಗೆ ಕರೆ ಬಂತು. ಮೂರು ಸೀನ್ಗಳಿಗೆ ಆಡಿಷನ್ಸ್ ಕೊಟ್ಟೆ. ನಾನು ಆಯ್ಕೆಯಾಗಿದ್ದೇನೆ ಅಂತ ವಿಷಯ ಗೊತ್ತಾಗಿ ತುಂಬ ಖುಷಿಯಾಯಿತು’ ಎಂದು ತಾವು ಚಿತ್ರಕ್ಕೆ ಆಯ್ಕೆಯಾದ ಕುರಿತು ಹೇಳಿಕೊಳ್ಳುತ್ತಾರೆ ನಾಯಕಿ ಸಿರಿ ಪ್ರಹ್ಲಾದ್.
ಮೂರು ಶೇಡ್ಗಳಲ್ಲಿ ಸಿರಿ
ಅಂದಹಾಗೆ ಸಿರಿ ಪ್ರಹ್ಲಾದ್ ಅವರಿಲ್ಲಿ ಮೂರು ಶೇಡ್ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘1970ರ ದಶಕದಲ್ಲಿ ಪ್ರಾರಂಭವಾಗುವ ಕಥೆ 2015ರವರೆಗೂ ಸಾಗುತ್ತದೆ. ಹೀಗಾಗಿ ನನ್ನ ಪಾತ್ರವೂ ವಯಸ್ಸಿಗೆ ತಕ್ಕಂತೆ ಮೂರು ಶೇಡ್ಗಳಲ್ಲಿ ಇರಲಿದೆ. ಆಗಿನ ಕಾಲದ ಹೆಣ್ಣುಮಕ್ಕಳು ಹೇಗೆ ಯೋಚನೆ ಮಾಡುತ್ತಿದ್ದರು? ಬಾಡಿ ಲಾಂಗ್ವೇಜ್ ಹೇಗಿರುತ್ತಿತ್ತು? ಮಾತನಾಡುವ ರೀತಿ ಹೇಗಿತ್ತು? ಹೀಗೆ ಅಮ್ಮನ ಬಳಿ ಮಾತನಾಡುತ್ತಿದ್ದೆ. ಬಳಿಕ ಶೂಟಿಂಗ್ ಸ್ಪಾಟ್ನಲ್ಲಿ ಲಲಿತಾ ಮೇಡಂ ಬಳಿ ಸಹ ಮಾತನಾಡಿ ಕೆಲವು ವಿಷಯ ತಿಳಿದುಕೊಂಡೆ. ನಾನು ಮೂಲತಃ ಉತ್ತರ ಕರ್ನಾಟಕದ ಭಾಗದವಳೇ. ಆದರೆ ಹೆಚ್ಚು ಬೆಳೆದಿದ್ದು ಮೈಸೂರಿನಲ್ಲಿ. ಹೀಗಾಗಿ ಚಿತ್ರೀಕರಣ ಪ್ರಾರಂಭಕ್ಕೂ ಮುನ್ನ 15 ದಿನಗಳ ವರ್ಕ್ಶಾಪ್ ಸಮಯದಲ್ಲಿ ಸಾಕಷ್ಟು ಕಲಿತೆ’ ಎಂದು ಪಾತ್ರದ ಸಿದ್ಧತೆ ಬಗ್ಗೆ ಹೇಳಿಕೊಳ್ಳುತ್ತಾರೆ ಸಿಹಿ ಪ್ರಹ್ಲಾದ್.
ಈ ಸಿನಿಮಾ ಜವಾಬ್ದಾರಿ ಹೆಚ್ಚಿಸಿದೆ...
‘ಲಲಿತಾ ಸಂಕೇಶ್ವರ ಮೇಡಂ ಎಷ್ಟು ಎತ್ತರಕ್ಕೆ ಬೆಳೆದಿದ್ದರೂ ತುಂಬ ಸರಳವಾಗಿ ಇರುತ್ತಿದ್ದರು. ತುಂಬ ಆಪ್ತವಾಗಿ ನಮ್ಮ ಜತೆ ಮಾತನಾಡುತ್ತಿದ್ದರು. ಎಷ್ಟೋ ವರ್ಷದ ಪರಿಚಯವಿರುವಂತೆ ಅನ್ನಿಸುತ್ತಿತ್ತು. ಅವರ ಕುಟುಂಬದವರಂತೆಯೇ ನಮ್ಮನ್ನೂ ಟ್ರೀಟ್ ಮಾಡುತ್ತಿದ್ದರು. ಅವರ ಪಾತ್ರದಲ್ಲಿ ನಟಿಸಿದ್ದು ನನಗೆ ಹೆಚ್ಚು ಖುಷಿ ನೀಡಿದೆ. ಅದಕ್ಕೆ ಅವಕಾಶ ನೀಡಿದ ವಿಆರ್ಎಲ್ ಫಿಲಂ ಪ್ರೊಡಕ್ಷನ್ಸ್ಗೆ, ಡಾ. ವಿಜಯ ಸಂಕೇಶ್ವರ ಸರ್, ಡಾ. ಆನಂದ ಸಂಕೇಶ್ವರ ಸರ್ ಮತ್ತು ನಿರ್ದೇಶಕಿ ರಿಷಿಕಾ ಶರ್ವಗೆ ಧನ್ಯವಾದಗಳು’ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಸಿರಿ.
‘ವಿಜಯಾನಂದ’ ಚಿತ್ರ ಸಿರಿ ಸಿನಿಕರಿಯರ್ಗೆ ಟರ್ನಿಂಗ್ ಪಾಯಿಂಟ್ ಅಂತೆ. ಅದಕ್ಕೆ ಕಾರಣ ನೀಡುವ ಅವರು, ‘‘ಒಂದು ಶಿಕಾರಿಯ ಕಥೆ’, ‘ಲಾ’, ‘ಬಡ್ಡೀಸ್’ ಬಳಿಕ ನಾನು ನಟಿಸಿರುವ ನಾಲ್ಕನೇ ಚಿತ್ರವಿದು. ದೊಡ್ಡ ಬಜೆಟ್ನಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿದ್ಧವಾಗಿದೆ. ಜತೆಗೆ ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ. ಅನಂತ್ ನಾಗ್, ವಿನಯಾ ಪ್ರಸಾದ್, ಪ್ರಕಾಶ್ ಬೆಳವಾಡಿ... ಇಂತಹ ದಿಗ್ಗಜರ ಜತೆ ತೆರೆ ಹಂಚಿಕೊಳ್ಳುವ ಅವಕಾಶ ಸಿಕ್ಕಿದ್ದೇ ನನ್ನ ಅದೃಷ್ಟ. ಕಲಾವಿದೆಯಾಗಿ ನಾನು ಏನೇನು ಕನಸು ಕಾಣುತ್ತಿದ್ದೆನೋ, ಆ ಕನಸುಗಳು ಇನ್ನು ಮುಂದೆ ನನಸಾಗುವ ವಿಶ್ವಾಸವಿದೆ. ‘ವಿಜಯಾನಂದ’ ಚಿತ್ರದ ಮೊದಲು ನಾನು ಬೇರೆ ಸಿರಿಯಾಗಿದ್ದೆ, ಈ ಸಿನಿಮಾದಲ್ಲಿ ಕೆಲಸ ಮಾಡಿದ ಬಳಿಕ ವೃತ್ತಿಪರಳಾಗಿ, ವೈಯಕ್ತಿಕವಾಗಿ ತುಂಬ ಕಲಿತಿದ್ದೇನೆ. ಈ ಸಿನಿಮಾ ನನ್ನ ಮೇಲಿನ ಜವಾಬ್ದಾರಿ ಹೆಚ್ಚಿಸಿದೆ. ಮುಂದೆ ನಾನು ಮಾಡುವ ಪಾತ್ರಗಳು ಹೇಗಿರಬೇಕು ಎಂಬ ಸ್ಪಷ್ಟತೆ ನೀಡಿದೆ’ ಎಂದು ಹೇಳಿಕೊಳ್ಳುತ್ತಾರೆ ಸಿರಿ. ಸದ್ಯ ಅವರು ಎರಡು ಹೊಸ ಚಿತ್ರಗಳನ್ನು ಒಪ್ಪಿಕೊಂಡಿದ್ದು, ಹೊಸ ವರ್ಷಕ್ಕೆ ಸೆಟ್ಟೇರುವ ನಿರೀಕ್ಷೆಯಿದೆ. ಸದ್ಯ ‘ವಿಜಯಾನಂದ’ ಬಿಡುಗಡೆಗೆ ಅವರು ಎದುರು ನೋಡುತ್ತಿದ್ದಾರೆ.
ಚಿತ್ರಕ್ಕೆ ಯು ಪ್ರಮಾಣಪತ್ರ
ಇತ್ತೀಚೆಗಷ್ಟೇ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ‘ವಿಜಯಾನಂದ’ ಸಿನಿಮಾ ವೀಕ್ಷಿಸಿದ್ದು, ಚಿತ್ರಕ್ಕೆ ‘ಯು’ ಸರ್ಟಿಫಿಕೇಟ್ ನೀಡಿದೆ ಎಂದು ನಿರ್ವಪಕ ಡಾ. ಆನಂದ ಸಂಕೇಶ್ವರ ತಿಳಿಸಿದ್ದಾರೆ.