

ಚೆನ್ನೈ: ಸಾವಿರಾರು ಹಾಡುಗಳ ಮೂಲಕ ಸಂಗೀತ ಪ್ರಿಯರ ಮನದಲ್ಲಿ ತಮ್ಮದೇ ಸ್ಥಾನ ಪಡೆದಿರುವ ಸ್ವರ ಮಾಂತ್ರಿಕ ಹಾಗೂ ದಿಗ್ಗಜ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಮತ್ತೆ ಬಿಗಡಾಯಿಸಿದೆ.
ಎಸ್ಪಿಬಿ ಅವರಿಗೆ ಆಗಸ್ಟ್ 5ರಂದು ಕರೊನಾ ಸೋಂಕು ದೃಢವಾಗಿತ್ತು. ಅದೇ ದಿನ ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಎಸ್ಪಿಬಿ ಗುಣಮುಖರಾಗಿ ಬರಲೆಂದು ಚಿತ್ರರಂಗ ಸೇರಿದಂತೆ ಅನೇಕರು ಪ್ರಾರ್ಥಿಸಿದ್ದರು. ಹೀಗಿರುವಾಗ ಆಗಸ್ಟ್ 28ರಿಂದ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿತ್ತು. ಅಲ್ಲದೆ, ಕರೊನಾ ನಗೆಟಿವ್ ಸಹ ಆಗಿತ್ತು. ಈ ಬಗ್ಗೆ ಎಸ್ಪಿಬಿ ಮಗ ಎಸ್.ಪಿ. ಚರಣ್ ಮಾಧ್ಯಮಗಳಿಗೆ ತಿಳಿಸಿದ್ದರು.
ಇನ್ನೇನು ಬಿಡುಗಡೆಯಾಗಲಿದ್ದಾರೆ ಎನ್ನುವಷ್ಟರಲ್ಲಿ ಇದೀಗ ಮತ್ತೆ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಕೆಲವು ದಿನಗಳಿಂದ ಆರೋಗ್ಯ ಸ್ಥಿತಿ ಬಿಗಡಾಯಿಸುತ್ತಿದ್ದು, ಯಾವುದೇ ಚೇತರಿಕೆ ಕಂಡುಬಂದಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಈಗಲೂ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದಿದ್ದಾರೆ. ಹೀಗಾಗಿ ಕುಟುಂಬ ಮತ್ತು ಅಭಿಮಾನಿಗಳಲ್ಲಿ ಮತ್ತೆ ಆತಂಕ ಆವರಿಸಿದೆ.
ಎಸ್ಪಿಬಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ, ಎಸಿಎಂಒ (ಎಕ್ಸ್ಟ್ರಾ ಕಾರ್ಪೊರಿಯಲ್ ಮೆಂಬ್ರೇನ್ ಆಕ್ಸಿಜೆನೇಷನ್) ಮೂಲಕವೂ ಚಿಕಿತ್ಸೆ ನೀಡಲಾಗುತ್ತಿದೆ. ಹೃದಯ ಮತ್ತು ಶ್ವಾಸಕೋಸ ತೊಂದರೆ ಇರುವವರಿಗೆ ಎಸಿಎಂಒ ಚಿಕಿತ್ಸೆ ನೀಡಲಾಗುತ್ತದೆ. (ಏಜೆನ್ಸೀಸ್)