ಸೂರ್ಯಗೆ ನಾಯಕಿಯಾಗಿದ್ದ ಸಿಮ್ರಾನ್​ ಈಗ ಕಾರ್ತಿಗೆ ವಿಲನ್​ ...

Karthi - Simran - Final
Published on

ಚೆನ್ನೈ: ಒಂದು ಕಾಲದಲ್ಲಿ ಕಾಲಿವುಡ್​ನ ಜನಪ್ರಿಯ ನಾಯಕಿಯಾಗಿದ್ದವರು ಸಿಮ್ರಾನ್​. ಮದುವೆಯ ನಂತರ ಕ್ರಮೇಣ ಅವರು ಚಿತ್ರರಂಗದಿಂದ ದೂರ ಸರಿದರು. ಆದರೆ, ಬಣ್ಣದ ನಂಟು ಬಿಡಬೇಕಲ್ಲ. ಮದುವೆಯ ನಂತರವೂ ಅವರು ಆಗಾಗ ಕೆಲವು ಸಿನಿಮಾಗಳಲ್ಲಿ ನಟಿಸಿದ್ದುಂಟು.

ಈಗ ಹೊಸ ವಿಷಯವೇನೆಂದರೆ, ಒಂದು ಕಾಲಕ್ಕೆ ಸೂರ್ಯಗೆ ನಾಯಕಿಯಾಗಿದ್ದ ಸಿಮ್ರಾನ್​, ಇದೀಗ ಸೂರ್ಯ ಸಹೋದರ ಕಾರ್ತಿ ಎದುರು ವಿಲನ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾರ್ತಿ ಅಭಿನಯದ ಹೊಸ ಸಿನಿಮಾದಲ್ಲಿ ಸಿಮ್ರಾನ್​ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕಾಲಿವುಡ್​ನಲ್ಲಿ ಇದು ದೊಡ್ಡ ಸುದ್ದಿಯಾಗಿದೆ.
ಅಂದಹಾಗೆ, ಕಾರ್ತಿ ಅಭಿನಯದ ಹೊಸ ಚಿತ್ರದ ಹೆಸರು 'ಸರ್ದಾರ್​'. ಇದೊಂದು ಸ್ಪೈ ಥ್ರಿಲ್ಲರ್​ ಚಿತ್ರವಾಗಿದ್ದು, ಪಿ.ಎಸ್​. ಮಿತ್ರನ್​ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇನ್ನು, ಪ್ರಿನ್ಸ್​ ಪಿಕ್ಚರ್ಸ್​ ಎಂಬ ಸಂಸ್ಥೆ ಈ ಚಿತ್ರವನ್ನು ನಿರ್ಮಿಸುತ್ತಿದೆ.

ಈ ಚಿತ್ರದಲ್ಲಿ ಕಾರ್ತಿಗೆ ನಾಯಕಿಯರಾಗಿ ರಾಶಿ ಖನ್ನಾ ಮತ್ತು ರಜಿಶಾ ವಿಜಯನ್​ ನಟಿಸುತ್ತಿದ್ದು, ಸಿಮ್ರಾನ್​ ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಇದುವರೆಗೂ ಒಳ್ಳೆಯ ಪಾತ್ರಗಳಲ್ಲೇ ಕಾಣಿಸಿಕೊಂಡಿದ್ದ ಸಿಮ್ರಾನ್​ ಅವರನ್ನು ನೆಗೆಟಿವ್​ ಪಾತ್ರದಲ್ಲಿ ಪ್ರೇಕ್ಷಕರು ಒಪ್ಪುತ್ತಾರಾ ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. ಒಪ್ಪುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಸಿಮ್ರಾನ್​ ಈ ಚಿತ್ರದಲ್ಲಿ ಏನು ಪಾತ್ರ ಮಾಡಿದ್ದಾರೆ ಮತ್ತು ಹೇಗೆ ಮಾಡಿದ್ದಾರೆ ಎಂದು ನೋಡುವುದಕ್ಕಾದರೂ ಜನ ಚಿತ್ರಮಂದಿರದ ಕಡೆ ಖಂಡಿತಾ ಬರುತ್ತಾರೆ ಎಂಬ ನಂಬಿಕೆ ಚಿತ್ರತಂಡದವರಿಗೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net