ಪಂಚಾಕ್ಷರಿ ಗವಾಯಿ ಚಿತ್ರಕ್ಕೆ ರಜತ ಸಂಭ್ರಮ

Ullasa=1
Published on

ಬೆಂಗಳೂರು: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಿಂದ ಕೆಜಿ ರಸ್ತೆಯವರೆಗೂ ದೊಡ್ಡ ಮೆರವಣಿಗೆ. ಮುಂದೆ ಜಾನಪದ ಮೇಳ. ಹಿಂದೆ ಅಪಾರ ಸಂಖ್ಯೆಯ ಭಕ್ತಾದಿಗಳು ಮತ್ತು ಸಂಗೀತಾಭಿಮಾನಿಗಳು. ಅವರ ನಡುವೆ ಚಿತ್ರದ ಪ್ರಿಂಟ್ ಹೊತ್ತು ತಂದ ಆನೆ, ಅದನ್ನು ಕಲ್ಪನಾ ಟಾಕೀಸಿಗೆ ಮುಟ್ಟಿಸಿತ್ತು. ಹೀಗೆ ಭರ್ಜರಿಯಾಗಿ ಬಿಡುಗಡೆಯಾದ ‘ಸಂಗೀತ ಸಾಗರ ಗಾನಯೋಗಿ ಪಂಚಾಕ್ಷರಿ ಗವಾಯಿ’ ಚಿತ್ರಕ್ಕೆ ಇದೀಗ 25 ವರ್ಷದ ಸಂಭ್ರಮ. ಕನ್ನಡ ನಾಡು ಕಂಡ ಅಪ್ರತಿಮ ಸಂಗೀತಗಾರ ಗಾನಯೋಗಿ ಪಂಚಾಕ್ಷರಿ ಗವಾಯಿ ಅವರ ಜೀವನವನ್ನಾಧರಿಸಿದ ಈ ಚಿತ್ರವು, ಸರಿಯಾಗಿ ಇದೇ ದಿನ, ಅಂದರೆ 1995ರ ಸೆಪ್ಟೆಂಬರ್ ಒಂದರಂದು ಬಿಡುಗಡೆಯಾಗಿತ್ತು. ಹೀಗೆ ಬಿಡುಗಡೆಯಾದ ಚಿತ್ರವು ನಂತರದ ದಿನಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ಗಾಯಕ (ಎಸ್.ಪಿ. ಬಾಲಸುಬ್ರಹ್ಮಣ್ಯಂ) ಮತ್ತು ಅತ್ಯುತ್ತಮ ಸಂಗೀತ ನಿರ್ದೇಶಕ (ಹಂಸಲೇಖ) ಪ್ರಶಸ್ತಿಗಳನ್ನು ತಂದುಕೊಟ್ಟಿತ್ತು. ಅಷ್ಟೇ ಅಲ್ಲ, ರಾಜ್ಯ ಮಟ್ಟದಲ್ಲಿ ಮೂರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತ್ತು. ಚಿತ್ರವು 25 ವರ್ಷ ಪೂರೈಸಿದ ಸಂತೋಷದಲ್ಲಿ ‘ವಿಜಯವಾಣಿ’ ಜತೆಗೆ ಮಾತನಾಡಿದ ಚಿತ್ರದ ನಿರ್ದೇಶಕ ಚಿಂದೋಡಿ ಬಂಗಾರೇಶ್, ‘ಒಮ್ಮೆ ಅವರ ಜೀವನ ಚರಿತ್ರೆ ಓದಿದಾಗ ಅದ್ಭುತ ಎಂದೆನಿಸಿತು. ಅವರ ಕೊಡುಗೆ ಅಪಾರ ಎಂದೆನಿಸಿತು. ಸಮಾಜಸೇವೆ ಮತ್ತು ಸಂಗೀತವನ್ನು ಮೂಲವಾಗಿಟ್ಟುಕೊಂಡು ಕೃತಿ ಮಾಡಿದೆ. ನಮ್ಮ ಅತ್ತೆ ಚಿಂದೋಡಿ ಲೀಲಾ ಅವರು ಚಿತ್ರ ನಿರ್ವಿುಸುವುದಕ್ಕೆ ಮುಂದೆ ಬಂದರು. ಗಿರೀಶ್ ಕಾರ್ನಾಡ್, ಲೋಕೇಶ್, ವಿಜಯ ರಾಘವೇಂದ್ರ ಸೇರಿ ಹಲವರು ಚಿತ್ರದಲ್ಲಿ ನಟಿಸಿದರು’ ಎನ್ನುತ್ತಾರೆ ಬಂಗಾರೇಶ್. ಈ ಚಿತ್ರಕ್ಕೆ ಹಂಸಲೇಖ ಮತ್ತು ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಕೊಡುಗೆ ಅಪಾರ ಎನ್ನುವ ಬಂಗಾರೇಶ್, ‘ಬೇರೆ ಚಿತ್ರಗಳಂತೆ ಈ ಚಿತ್ರದಲ್ಲಿ ಸಂಗೀತ ನಿರ್ದೇಶಕ ಎಂದು ಹಾಕುವುದಕ್ಕೆ ಹಂಸಲೇಖ ಅವರು ಒಪ್ಪಲಿಲ್ಲ. ಅದರ ಬದಲು ಸಂಗೀತ ಸೇವೆ ಎಂಬ ಕ್ರೆಡಿಟ್ ನೀಡಲಾಗಿದೆ. ಇನ್ನು ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ‘ಘುಮಂಡ್ ಘುಮಂಡ್ ...’ ಹಾಡು ತಮ್ಮಿಂದ ಸಾಧ್ಯವೇ ಇಲ್ಲ ಎಂದರು. ಆದರೆ, ಅವರೇ ಹಾಡಬೇಕು ಎಂಬ ಹಠ ನಮ್ಮದು. ಕೊನೆಗೆ ಒತ್ತಾಯಕ್ಕೆ ಮಣಿದು ಆರೂವರೆ ನಿಮಿಷಗಳ ಈ ಹಾಡನ್ನು ಹಾಡಿದರು. ಸಾಮಾನ್ಯವಾಗಿ ಒಂದು ದಿನದಲ್ಲಿ 15 ಹಾಡುಗಳನ್ನು ಹಾಡುತ್ತಿದ್ದ ಅವರು, ಈ ಹಾಡನ್ನು ಹಾಡುವುದಕ್ಕೆ ಆರು ತಾಸು ತೆಗೆದುಕೊಂಡರು’ ಎಂದು ನೆನಪಿಸಿಕೊಳ್ಳುತ್ತಾರೆ ಬಂಗಾರೇಶ್.

ಆಗ ನಾನಿರಲ್ಲ, ನೀನಿರ್ತೀಯ:  ‘ಸಂಗೀತ ಸಾಗರ ಗಾನಯೋಗಿ ಪಂಚಾಕ್ಷರಿ ಗವಾಯಿ’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭದಲ್ಲಿ ಪುಟ್ಟರಾಜ ಗವಾಯಿಗಳು ಹೇಳಿದ ಒಂದು ಸ್ವಾರಸ್ಯಕರ ಘಟನೆಯನ್ನು ನೆನಪಿಸಿಕೊಳ್ಳುವ ಬಂಗಾರೇಶ್, ‘ನಮ್ಮ ತಾತ ಚಿಂದೋಡಿ ಶಾಂತವೀರಪ್ಪನವರು 1935-36ರ ಆಸುಪಾಸಿನಲ್ಲಿ ‘ಹೇಮರೆಡ್ಡಿ ಮಲ್ಲಮ್ಮ’ ನಾಟಕವನ್ನಾಡಿಸುತ್ತಿದ್ದರು. ಆ ಸಂದರ್ಭದಲ್ಲಿ ಹಾಮೋನಿಯಂ ಮತ್ತು ತಬಲಾ ನುಡಿಸುವವರು ಅದೊಂದು ದಿನ ಕೈಕೊಟ್ಟು ಓಡಿ ಹೋಗಿದ್ದರು. ಹಾಮೋನಿಯಂ ಮತ್ತು ತಬಲಾ ನುಡಿಸುವವರು ಯಾರಾದರೂ ಗೊತ್ತಿದ್ದರೆ ಹೇಳಿ ಎಂದು ಪಂಚಾಕ್ಷರಿ ಗವಾಯಿಗಳನ್ನು ಕೇಳಲು ಹೋಗಿದ್ದರಂತೆ ನಮ್ಮ ತಾತ. ಆಗ ಅವರು, ‘ಬೇರೆಯವರು ಯಾಕೆ? ನಾವೇ ಬರುತ್ತೀವಿ ...’ ಎಂದು ಅಣ್ಣಿಗೇರಿಗೆ ಬಂದಿದ್ದರಂತೆ. ಪಂಚಾಕ್ಷರಿ ಗವಾಯಿಗಳು ತಬಲಾ ನುಡಿಸಿದರೆ ಪುಟ್ಟರಾಜ ಗವಾಯಿಗಳು ಹಾಮೋನಿಯಂ ನುಡಿಸಿದ್ದರಂತೆ. ವಾಪಸ್ಸು ಹೋಗುವ ಸಂದರ್ಭದಲ್ಲಿ, ತಮಗೇನು ಕೊಡಲಿಲ್ಲ ಎಂದು ಪುಟ್ಟರಾಜ ಗವಾಯಿಗಳು ಬೇಸರಿಸಿಕೊಂಡಿದ್ದರಂತೆ. ಅದಕ್ಕೆ ಪಂಚಾಕ್ಷರಿ ಗವಾಯಿಗಳು, ‘ಈಗ ಕೊಡುವುದಕ್ಕೆ ಅವರ ಬಳಿ ಏನೂ ಇಲ್ಲ. ಮುಂದೊಂದು ದಿನ ಖಂಡಿತ ಕೊಡುತ್ತಾರೆ. ಆಗ ನಾನಿರುವುದಿಲ್ಲ, ನೀನಿರುತ್ತೀಯ. ಖಂಡಿತ ತೆಗೆದುಕೊಳ್ಳುತ್ತೀಯ’ ಎಂದಿದ್ದರಂತೆ. ಆ ಋಣವನ್ನು ಈಗ ಚಿತ್ರ ಮಾಡುವ ಮೂಲಕ ತೀರಿಸಿದ್ದಾರೆ ಎಂದು ಸ್ವತಃ ಪುಟ್ಟರಾಜ ಗವಾಯಿಗಳು ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಹೇಳಿಕೊಂಡಿದ್ದರು’ ಎನ್ನುತ್ತಾರೆ ಚಿಂದೋಡಿ ಬಂಗಾರೇಶ್.

ಹಾನಗಲ್ ಕುಮಾರಸ್ವಾಮಿ ಕುರಿತ ಚಿತ್ರ: ಈ ಹಿಂದೆ ಪಂಚಾಕ್ಷರಿ ಗವಾಯಿಗಳ ಕುರಿತು ಚಿತ್ರ ಮಾಡಿದ್ದ ಬಂಗಾರೇಶ್, ಇದೀಗ ಗವಾಯಿಗಳ ಗುರುಗಳಾದ ಹಾನಗಲ್ ಕುಮಾರಸ್ವಾಮಿ ಕುರಿತು ಚಿತ್ರ ಮಾಡುವುದಕ್ಕೆ ಹೊರಟಿದ್ದಾರೆ. ‘ಈಗಾಗಲೇ ಕಥೆ- ಚಿತ್ರಕಥೆ ಕೆಲಸಗಳೆಲ್ಲಾ ಮುಗಿದಿದ್ದು, ಇನ್ನು ಕೆಲವೇ ದಿನಗಳಲ್ಲಿ ಅದನ್ನು ಅಧಿಕೃತವಾಗಿ ಘೋಷಿಸುತ್ತೇನೆ. ಕುಮಾರಸ್ವಾಮಿಗಳ ಪಾತ್ರಕ್ಕೆ ನನ್ನ ಮನಸ್ಸಿನಲ್ಲಿ ಇಬ್ಬರು ದೊಡ್ಡ ಕಲಾವಿದರು ಇದ್ದಾರೆ. ಅವರು ಒಪ್ಪಿದರೆ ಸರಿ, ಇಲ್ಲವಾದರೆ ಹೊಸಬರನ್ನಿಟ್ಟುಕೊಂಡು ಚಿತ್ರ ಮಾಡುವ ಯೋಚನೆ ಇದೆ’ ಎನ್ನುತ್ತಾರೆ ಬಂಗಾರೇಶ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net