

ಬೆಂಗಳೂರು: ಸೈಮಾ (ಸೌಥ್ ಇಂಡಿಯನ್ ಇಂಟರ್ನ್ಯಾಷನಲ್ ಅವಾರ್ಡ್ಸ್) ಪ್ರಶಸ್ತಿ ಪ್ರದಾನ ಸಮಾರಂಭಗಳು ಇದುವರೆಗೂ ವಿದೇಶದಲ್ಲಿ ನಡೆದಿದ್ದೇ ಹೆಚ್ಚು. ದುಬೈ, ಸಿಂಗಾಪೂರ್, ಖತಾರ್, ಮಲೇಷ್ಯಾ ಮುಂತಾದ ದೇಶಗಳಲ್ಲಿ ಈ ಸಮಾರಂಭವನ್ನು ಆಯೋಜಿಸಲಾಗಿತ್ತು. ಒಂದು ವರ್ಷ ಮಾತ್ರ ಹೈದರಾಬಾದ್ನಲ್ಲಿ ಆಯೋಜಿತವಾಗಿದ್ದ ಈ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಈ ವರ್ಷ ಬೆಂಗಳೂರಿನಲ್ಲಿ ಆಯೋಜಿಸಲಾಗಿರುವುದು ವಿಶೇಷ. ಪುನೀತ್ ರಾಜಕುಮಾರ್ ಸ್ಮರಣಾರ್ಥ ಈ ಸಮಾರಂಭವನ್ನು ಅರಮನೆ ಮೈದಾನದಲ್ಲಿ ಸೆ. 10 ಮತ್ತು 11 ಆಯೋಜಿಸಲಾಗಿದ್ದು, ಈ ಸಂಬಂಧ ಮಾಹಿತಿ ಕೊಡುವುದಕ್ಕೆ ಪತ್ರಿಕಾಗೋಷ್ಠಿಯನ್ನು ಆಯೋಜಿಸಲಾಗಿತ್ತು. ಈ ಪ್ರಶಸ್ತಿ ಸಮಾರಂಭದ ಮುಖ್ಯಸ್ಥೆ ಬೃಂದಾ ಪ್ರಸಾದ್ ಜತೆಗೆ ಧನಂಜಯ್, ರಾಣಾ ದಗ್ಗುಬಾಟಿ, ಶಾನ್ವಿ ಶ್ರೀವಾತ್ಸವ್, ಶ್ರೀಲೀಲಾ ಮುಂತಾದವರು ಹಾಜರಿದ್ದರು.
ಈ ಪ್ರಶಸ್ತಿಗಳ ಕುರಿತು ಮಾತನಾಡಿದ ಧನಂಜಯ್, ‘ನನಗೆ ಸೈಮಾ ಬರೀ ಪ್ರಶಸ್ತಿ ಅಲ್ಲ. ಅದೊಂದು ನೆನಪು. ನಾನು ಮೊದಲ ಬಾರಿ ಈ ಪ್ರಶಸ್ತಿ ಸ್ವೀಕರಿಸಲು ಮಲೇಷ್ಯಾಗೆ ಹೋಗಿದ್ದು ನನ್ನ ಹೃದಯದಲ್ಲಿ ಇನ್ನೂ ಹಸಿರಾಗಿದೆ. ಈ ಬಾರಿ ನಮ್ಮ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿರುವುದು ಹೆಚ್ಚು ಖುಷಿ ತಂದಿದೆ. ಪದೇಪದೆ ಬೆಂಗಳೂರಿನಲ್ಲೇ ಈ ಸಮಾರಂಭ ಮಾಡಬೇಕು ಎನ್ನುವಷ್ಟರ ಮಟ್ಟಿಗೆ ಈ ಸಮಾರಂಭ ಯಶಸ್ವಿಯಾಗಲಿ’ ಎಂದು ಹಾರೈಸಿದರು. ಪುನೀತ್ ರಾಜಕುಮಾರ್ಗೆ ಗೌರವ ಸಲ್ಲಿಸುವುದರ ಜತೆಗೆ, ಇತ್ತೀಚೆಗೆ ಕನ್ನಡ ಚಿತ್ರಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿರುವುದರಿಂದ, ಈ ಬಾರಿ ಬೆಂಗಳೂರನ್ನು ಆಯ್ಕೆ ಮಾಡಲಾಗಿದೆ ಎಂದು ಬೃಂದಾ ಪ್ರಸಾದ್ ಹೇಳಿದರು.