ಚಾರ್ಲ್ಸ್ ಡಿಕನ್ಸ್ ಕಥೆಗೆ ದೃಶ್ಯರೂಪ; 'ಸಿಗ್ನಲ್‌ ಮ್ಯಾನ್ 1971' ಸದ್ಯದಲ್ಲೇ ತೆರೆಗೆ

1971 A
Published on

ಬೆಂಗಳೂರು: ಇಂಗ್ಲೀಷ್ ಲೇಖಕ ಚಾರ್ಲ್ಸ್ ಡಿಕನ್ಸ್ ಅವರ 'ಸಿಗ್ನಲ್ ಮ್ಯಾನ್' ಕಥೆಯಿಂದ ಸ್ಫೂರ್ತಿ ಪಡೆದು ಕನ್ನಡದಲ್ಲಿ ಸದ್ದಿಲ್ಲದೆ ಒಂದು ಚಿತ್ರ ತಯಾರಾಗಿದೆ. ಅದೇ 'ಸಿಗ್ನಲ್‌ ಮ್ಯಾನ್ 1971'. ಈ ಚಿತ್ರವು 14ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಏಷ್ಯನ್ ಚಿತ್ರಗಳ ವಿಭಾಗಕ್ಕೆ ಈ ಚಿತ್ರ ಆಯ್ಕೆಯಾಗಿದ್ದು, ಈಗಾಗಲೇ ಒಂದು ಪ್ರದರ್ಶನ ಕಂಡಿದೆ. ಇನ್ನೊಂದು ಪ್ರದರ್ಶನ ನಾಳೆ (ಮಾರ್ಚ್​ 29) ಪ್ರದರ್ಶನ ಕಾಣಲಿದೆ.

ಈ ಹಿಂದೆ ಹಲವು ರಾಜ್ಯ ಪ್ರಶಸ್ತಿ ಪುರಸ್ಕೃತ ಚಿತ್ರಗಳನ್ನು ನಿರ್ದೇಶಿಸಿರುವ ಕೆ. ಶಿವರುದ್ರಯ್ಯ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಕುರಿತು ಮಾತನಾಡುವ ಅವರು, 'ಇಂಗ್ಲೀಷ್ ಲೇಖಕ ಚಾರ್ಲ್ಸ್ ಡಿಕನ್ಸ್ ಅವರ 'ಸಿಗ್ನಲ್ ಮ್ಯಾನ್' ಕಥೆಯಿಂದ ಸ್ಪೂರ್ತಿ ಪಡೆದ ನಾನು ಈ ಚಿತ್ರ ಮಾಡಬೇಕೆಂದು ಕೊಂಡೆ. ಈ ವಿಷಯವನ್ನು ಪ್ರಕಾಶ್ ಬೆಳವಾಡಿ ಅವರ ಹತ್ತಿರ ಹೇಳಿದಾಗ, ಈ ಕಥೆಯನ್ನು ಭಾರತ ದೇಶಕ್ಕೆ ತಕ್ಕ ಹಾಗೆ ಅವರು ಕಥೆ ಹೆಣೆದು ಕೊಟ್ಟರು. 1971ರ ಕಾಲಘಟ್ಟದಲ್ಲಿ ನಡೆಯುವ ಕಥೆಯಿದು. ಆಗಷ್ಟೇ ಭಾರತ - ಪಾಕ್ ಯುದ್ದದ ಭೀತಿ ದೇಶದೆಲ್ಲೆಡೆ ಇರುತ್ತದೆ. ಅಂತಹ ಸಮಯದಲ್ಲಿ ನಡೆಯುವ ಕಥೆ ಇದು. ಅದೊಂದು ಪಶ್ಚಿಮ ಘಟ್ಟದ ರೈಲ್ವೆ ನಿಲ್ದಾಣ. ಆದರೆ, ಅಲ್ಲಿ ರೈಲು ನಿಲುವುದಿಲ್ಲ. ಆ ನಿಲ್ದಾಣದಲೊಬ್ಬ ಬಾಲು ಎಂಬ ಸಿಗ್ನಲ್ ಮ್ಯಾನ್. ಅಲ್ಲಿಗೆ ಆತನೇ ಎಲ್ಲಾ. ಅಂತಹ ಸುಂದರ ಪರಿಸರದಲ್ಲಿರುವ ನಿಲ್ದಾಣಕ್ಕೆ ಅನಿರೀಕ್ಷಿತವಾಗಿ ಫೋಟೋಗ್ರಾಫರ್ ರಾಜಶೇಖರ್ ಆಗಮನವಾಗುತ್ತದೆ. ಬಾಲುವಿನ ಒಂಟಿತನ, ತಳಮಳ, ಹಿಂದಿನ ನೆನಪುಗಳು, ಯುದ್ದದ ಭೀತಿ. ಸೈನಿಕರನ್ನು ಹೊತ್ತೊಯುವ ರೈಲುಗಳು ... ಇವೆಲ್ಲವೂ ಐದು ದಿನಗಳಲ್ಲಿ ತೆರೆದುಕೊಳ್ಳುತ್ತಾ ಹೋಗುತ್ತದೆ' ಎಂದು ಚಿತ್ರದ ಬಗ್ಗೆ ಮಾಹಿತಿ ನೀಡುತ್ತಾರೆ ಶಿವರುದ್ರಯ್ಯ.

ಪ್ರಕಾಶ್​ ಬೆಳವಾಡಿಗೆ ಮೊದಲು ಶಿವರುದ್ರಯ್ಯ ಒಂದು ಪಾತ್ರ ಮಾಡಲು ಹೇಳಿದರಂತೆ. ಆ ನಂತರ ಚಿತ್ರಕಥೆ ಬರೆದುಕೊಡಿ ಎಂದರಂತೆ. 'ನಾನು ಈ ಕಥೆಯನ್ನು ಭಾರತದ ಸೊಗಡಿಗೆ ತಕ್ಕ ಹಾಗೆ ಬರೆದಿದ್ದೇನೆ. ಊಟಿಯ ಬಳಿ ಹೆಚ್ಚು ಚಿತ್ರೀಕರಣ ನಡೆದಿದೆ. ಕೊಟ್ಟಿಗೆಹಾರ, ಚಿಕ್ಕಮಗಳೂರು, ಬೆಂಗಳೂರಿನಲ್ಲೂ ಚಿತ್ರೀಕರಣವಾಗಿದೆ. ಈ ಚಿತ್ರಕ್ಕಾಗಿ ಅದ್ದೂರಿ ಸೆಟ್ ನಿರ್ಮಿಸಲಾಗಿತ್ತು. ರೈಲು ಈ ಚಿತ್ರದ ಒಂದು ಭಾಗವಾಗಿತ್ತು. ಸಹ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ಸೊಗಸಾಗಿತ್ತು' ಎಂದರು ಪ್ರಕಾಶ್​ ಬೆಳವಾಡಿ.

ಹಿಂದೂಸ್ತಾನ್ ಮುಕ್ತ ಮೀಡಿಯಾ ಎಂಟರ್​ಟೇನರ್ಸ್ ಲಾಂಛನದಲ್ಲಿ ಗಣೇಶ್ ಪ್ರಭು ಈ ಚಿತ್ರವನ್ನು ನಿರ್ಮಿಸಿದ್ದು, ಚಿತ್ರಕ್ಕೆ ಶೇಖರ್ ಚಂದ್ರು ಛಾಯಾಗ್ರಹಣವಿದೆ. ಪ್ರಕಾಶ್​ ಬೆಳವಾಡಿ ಜತೆಗೆ ರಾಜೇಶ್ ನಟರಂಗ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net