

ಬೆಂಗಳೂರು: ಸ್ಟಾರ್ ಚಿತ್ರಗಳ ಟ್ರೇಲರ್ಗಳನ್ನು ಚಿತ್ರಮಂದಿರಗಳಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಬಿಡುಗಡೆ ಮಾಡುವುದು ಕನ್ನಡ ಚಿತ್ರರಂಗದಲ್ಲಿ ಟ್ರೆಂಡ್ ಆಗುತ್ತಿದೆ. ಇತ್ತೀಚೆಗೆ, ಪ್ರಜ್ವಲ್ ಅಭಿನಯದ 'ವೀರಂ' ಚಿತ್ರದ ಟ್ರೇಲರ್ ಸಹ ನಗರದ ಪ್ರಸನ್ನ ಚಿತ್ರಮಂದಿರದಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಗ್ರಾಂಡ್ ಆಗಿ ಬಿಡುಗಡೆ ಆಗಿದೆ.
ಈ ಟ್ರೇಲರ್ ಬಿಡುಗಡೆಯಲ್ಲಿ ಪ್ರಜ್ವಲ್ ದೇವರಾಜ್, ಶ್ರೀನಗರ ಕಿಟ್ಟಿ, ಶ್ರುತಿ, 'ಶಿಷ್ಯ' ದೀಪಕ್ ಮುಂತಾದವರು ಹಾಜರಿದ್ದರು. ಹಿರಿಯ ನಟ ದೇವರಾಜ್ ಅವರು ಚಿತ್ರದ ಟ್ರೈಲರ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು. 'ವೀರಂ' ಚಿತ್ರವನ್ನು 'ಖದರ್' ಕುಮಾರ್ ನಿರ್ದೇಶನ ಮಾಡಿದ್ದು, 'ಡಾಟರ್ ಆಫ್ ಪಾರ್ವತಮ್ಮ' ಮತ್ತು 'ಶುಗರ್ಲೆಸ್' ಚಿತ್ರಗಳನ್ನು ನಿರ್ಮಿಸಿದ್ದ ಕೆ.ಎಂ. ಶಶಿಧರ್ ನಿರ್ಮಾಣ ಮಾಡಿದ್ದಾರೆ. ಪ್ರಜ್ವಲ್ಗೆ ನಾಯಕಿಯಾಗಿ ರಚಿತಾ ರಾಮ್ ನಟಿಸಿದ್ದು, ಮಿಕ್ಕಂತೆ ಅಚ್ಯುತ್ ಕುಮಾರ್, ಬಲ ರಾಜ್ವಾಡಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರಜ್ವಲ್ ಈ ಚಿತ್ರದಲ್ಲಿ 'ಸಾಹಸಸಿಂಹ' ವಿಷ್ಣುವರ್ಧನ್ ಅವರ ಅಭಿಮಾನಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ಈ ಚಿತ್ರದ ನಿರ್ಮಾಪಕ, ನಿರ್ದೇಶಕರು ನನ್ನ ಬಳಿ ಬಂದಾಗ ಅವರ ಕಣ್ಣಲ್ಲಿ ಒಂದು ಕನಸು ಕಂಡೆ. ನನ್ನ ಜೊತೆ ಅಂದಕೂಡಲೇ ಕಿಟ್ಟಣ್ಣ ಸಹ ಕಥೆ ಕೇಳದೆ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡರು. ದಾದಾ ಅವರ ಹಚ್ಚೆ ಕೈಮೇಲೆ ಹಾಕಿಕೊಂಡು ಆಕ್ಟ್ ಮಾಡಲು ತುಂಬಾ ಖುಷಿಯಾಗಿತ್ತು' ಎಂದರು.
ಈ ಚಿತ್ರದಲ್ಲಿ ಖಳನಟನಾಗಿ ಕಾಣಿಸಿಕೊಂಡಿರುವ ಶಿಶ್ಯ ದೀಪಕ್ ಮಾತನಾಡುತ್ತಾ, 'ಈ ಪಾತ್ರವನ್ನು ನಾನು ಅನುಭವಿಸಿ ಮಾಡಿದ್ದೇನೆ. ನನ್ನ ಬಗ್ಗೆ ಬಹಳಷ್ಟು ಜನ ನೆಗೆಟಿವ್ ಮಾತಾಡಿದರೂ ನಿರ್ಮಾಪಕರು ಅದನ್ನು ಲೆಕ್ಕಿಸದೆ ನನಗೆ ಸಪೋರ್ಟ್ ಮಾಡಿದರು. 'ಶಿಷ್ಯ' ದೀಪಕ್ನನ್ನು 'ಜೇಡ' ದೀಪಕ್ ಮಾಡಿದ್ದಾರೆ' ಎಂದು ಗದ್ಗದಿತರಾದರು.
'ವೀರಂ' ಚಿತ್ರಕ್ಕೆ ಅನೂಪ್ ಸೀಳಿನ್ ಅವರ ಸಂಗೀತ ಮತ್ತು ಲವಿತ್ ಅವರ ಛಾಯಾಗ್ರಹಣವಿದೆ. ಚಿತ್ರವು ಏ.07ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.