

ಬೆಂಗಳೂರು: ಕೆಲವು ದಿನಗಳ ಹಿಂದೆ '1975' ಎಂಬ ಚಿತ್ರದಲ್ಲಿ ಸಿಂಧು ಲೋಕನಾಥ್ ವಿಶೇಷವಾದ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಸುದ್ದಿಯೊಂದು ಕೇಳಿಬಂದಿತ್ತು. ಈಗ ಆ ಚಿತ್ರ ಸಂಪೂರ್ಣವಾಗಿದೆ. ಅಷ್ಟೇ ಅಲ್ಲ, ಚಿತ್ರದ ನಾಯಕ ಜಯ್ ಶೆಟ್ಟಿ ಹುಟ್ಟುಹಬ್ಬದ ಪ್ರಯುಕ್ತ 'ಶುರುವಾಗಿದೆ' ಎಂಬ ಪ್ರೇಮಗೀತೆಯೊಂದು ಬಿಡುಗಡೆಯಾಗಿದೆ.
'1975' ಚಿತ್ರವನ್ನು ಬರೆದು ನಿರ್ದೇಶಿಸಿರುವವರು ವಸಿಷ್ಠ ಬಂಟನೂರು. ಈ ಹಿಂದೆ 'ಒನ್ ಲವ್ ಟೂ ಸ್ಟೋರಿ' ಎಂಬ ಚಿತ್ರದ ಮೂಲಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ವಸಿಷ್ಠ ಬಂಟನೂರು, ಈಗ '1975' ಚಿತ್ರ ನಿರ್ದೇಶಿಸಿದ್ದಾರೆ. ಈಗಾಗಲೇ ಚಿತ್ರ ಬಿಡುಗಡೆಗೆ ಸಜ್ಜಾಗಿ ನಿಂತಿದೆ. ಕ್ರೈಮ್ ಥ್ರಿಲ್ಲರ್ ಕಥೆ ಇರುವ ಈ ಸಿನಿಮಾದಲ್ಲಿ ಚಕ್ರವರ್ತಿ ಚಂದ್ರಚೂಡ್, ಜಯ್ ಶೆಟ್ಟಿ, ಮಾನಸ, ವೆಂಕಟೇಶ್ ಪ್ರಸಾದ್ ಸೇರಿದಂತೆ ಹಲವು ಕಲಾವಿದರಿದ್ದಾರೆ.
'1975' ಚಿತ್ರದ ಕುರಿತು ಮಾತನಾಡಿದ ವಸಿಷ್ಠ ಬಂಟನೂರು, 'ಇದು ನನ್ನ ಎರಡನೇ ಕನಸು. ನನ್ನ ಕನಸು ನನಸು ಮಾಡಲು ಕೈ ಜೋಡಿಸಿದ ನನ್ನ ತಂಡದವರು, ನಿರ್ಮಾಪಕರೂ ಎಲ್ಲರಿಗೂ ಧನ್ಯವಾದ. ಇದೊಂದು ಥ್ರಿಲ್ಲರ್ ಬೇಸ್ ಸಿನಿಮಾ. ಎರಡು ಗಂಟೆ ನಿಮಗೆ ಹೇಗೆ ಹೋಗುತ್ತದೆ ಅನ್ನೋದು ಗೊತ್ತೇ ಆಗುವುದಿಲ್ಲ' ಎಂದು ತಿಳಿಸಿದರು.
ಚಕ್ರವರ್ತಿ ಚಂದ್ರಚೂಡ್ ಮಾತನಾಡಿ, 'ಒಂದೊಳ್ಳೆಯ ತಂಡ ಸೇರಿಕೊಂಡು ಸಿನಿಮಾ ಮಾಡಿದ್ದೇವೆ. ಕ್ರೈಂ ಥ್ರಿಲ್ಲರ್ ಜಾನರ್ ಸಿನಿಮಾವಾಗಿದ್ದು, ನಿರ್ಮಾಪಕರು ಕೂಡ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲೀಗ ತೂಕದ ಸಿನಿಮಾಗಳು ಬರ್ತಿವೆ. ನಿರ್ದೇಶಕರು ಕನಸು ಕಟ್ಟಿಕೊಂಡು ಸಿನಿಮಾ ಮಾಡಿದ್ದಾರೆ. ಪ್ರತಿಯೊಬ್ಬರೂ ಸಿನಿಮಾಗೆ ಬೆಂಬಲ ನೀಡಿ' ಎಂದರು.
ಶಿವಪ್ರಸಾದ್ ಸಾಹಿತ್ಯವಿರುವ 'ಶುರುವಾಗಿದೆ ...' ಹಾಡಿಗೆ ಪವನ್ ಆರ್ ಕೊಟ್ಯಾನ್ ಧ್ವನಿಯಾಗಿದ್ದು, ಸಂದೇಶ್ ಬಾಬಣ್ಣ, ಧನಂಜಯ್ ವರ್ಮಾ, ಶಿವಪ್ರಸಾದ್ ಸಂಗೀತವಿದೆ.
ಸಿಲ್ವರ್ ಸ್ಕ್ರೀನ್ ಫಿಲ್ಮಂ ಫ್ಯಾಕ್ಟರಿ ಸಂಸ್ಥೆಯಡಿ ದಿನೇಶ್ ರಾಜನ್ ಸಿನಿಮಾಗೆ ಬಂಡವಾಳ ಹೂಡಿದ್ದು, ಬೆಂಗಳೂರು, ಉಡುಪಿ ಸೇರಿದಂತೆ ಚಿತ್ರೀಕರಣ ನಡೆದಿದೆ.