

ಚೆನ್ನೈ: ಸಕಲಕಲಾವಲ್ಲಭ ಕಮಲ್ ಹಾಸನ್ ಅವರ ಪುತ್ರಿ ಶ್ರುತಿ ಹಾಸನ್ ಬಹುಬೇಡಿಕೆಯ ಬಹುಭಾಷಾ ನಟಿ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ನಟನೆ, ಡಾನ್ಸ್, ಗ್ಲಾಮರ್ ಮತ್ತು ಗಾಯನದ ಮೂಲಕ ಶ್ರುತಿ ತುಂಬಾ ಮನೆ ಮಾತಾಗಿದ್ದಾರೆ. ಅಂದಹಾಗೆ ತಾರೆಯರ ಬದುಕು ತೆರೆಯ ಮೇಲೆ ಮತ್ತು ತೆರೆಯ ಹಿಂದೆ ಭಿನ್ನವಾಗಿರುತ್ತದೆ. ಅದಕ್ಕೆ ಶ್ರುತಿ ಹಾಸನ್ ಕೂಡ ಹೊರತಾಗಿಲ್ಲ. ಏಕೆಂದರೆ, ವೈಯಕ್ತಿಕ ವಿಚಾರದಿಂದಲೂ ಶ್ರುತಿ ಸಾಕಷ್ಟು ಸುದ್ದಿಯಾಗಿದ್ದಾರೆ.
ಎರಡು ವರ್ಷ ಡೇಟಿಂಗ್ ಮಾಡಿ ಬಾಯ್ಪ್ರೆಂಡ್ ಮೈಕಲ್ ಕೊರ್ಸಲೆ ಜತೆ ಬ್ರೇಕಪ್ ಮಾಡಿಕೊಂಡಿದ್ದರು. ಇದೀಗ ಬಾಯ್ಫ್ರೆಂಡ್ ಶಂತನು ಹಜಾರಿಕಾ ಜತೆಯೂ ಸಂಬಂಧ ಮುರಿದುಕೊಂಡಿದ್ದಾರೆ. ಸದ್ಯ ಶ್ರುತಿ ಅವರ ಬಾಯ್ಫ್ರೆಂಡ್ ಹುದ್ದೆ ಖಾಲಿ ಇದೆ. ಲವ್ ಲೈಫ್ ಬಿಟ್ಟು ಪೂರ್ಣ ಪ್ರಮಾಣದಲ್ಲಿ ಸಿನಿಮಾಗಳ ಕಡೆ ಗಮನ ಹರಿಸಿದ್ದಾರೆ.
ಶ್ರುತಿ ಹಾಸನ್ ಅವರು ಇತ್ತೀಚೆಗಷ್ಟೇ ಆಂಗ್ಲ ವಾಹಿನಿಯೊಂದಕ್ಕೆ ಮುಂಬೈನಲ್ಲಿರುವ ತಮ್ಮ ಮನೆಯನ್ನು ತೋರಿಸುತ್ತಾ ಸಂದರ್ಶನ ನೀಡಿದ್ದಾರೆ. ಈ ವೇಳೆ ಹಲವು ಸ್ವಾರಸ್ಯಕರ ಸಂಗತಿಗಳನ್ನು ಕ್ಯಾಮೆರಾ ಮುಂದೆ ಹಂಚಿಕೊಂಡಿದ್ದಾರೆ. ಅಂತಹ ಚಿತ್ರಗಳನ್ನು ಮಾಡಲು ನನಗೆ ನಾಚಿಕೆಯಾಗುವುದಿಲ್ಲ ಎನ್ನುವ ಮೂಲಕ ಬೋಲ್ಡ್ ಹೇಳಿಕೆ ನೀಡಿದ್ದಾರೆ. ಹಾಗಾದರೆ ಶ್ರುತಿ ಏನೆಲ್ಲಾ ಮಾತನಾಡಿದ್ದಾರೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ನಾನು ನನ್ನ ವೃತ್ತಿಜೀವನವನ್ನು ಪ್ರಾರಂಭಿಸಲು ಸಾಕಷ್ಟು ಕಷ್ಟಗಳನ್ನು ಎದುರಿಸಿದೆ. ನ್ಯೂಸ್ ಪೇಪರ್‌ನಲ್ಲಿ ನನ್ನ ಚಿತ್ರದ ಬಗ್ಗೆ ನೆಗಿಟಿವ್ ವಿಮರ್ಶೆಗಳನ್ನು ನೋಡಿ ನನಗೆ ತುಂಬಾ ಬೇಸರವಾಯಿತು. ನನ್ನ ಸ್ಥಾನದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ, ಅವರು ಖಂಡಿತ ಚಿತ್ರರಂಗವನ್ನು ತ್ಯಜಿಸುತ್ತಿದ್ದರು. ಆದರೆ ನಾನು ಇಲ್ಲೇ ಇರಲು ನಿರ್ಧರಿಸಿದೆ. ಪ್ರತಿ ಚಿತ್ರದಿಂದ ಸಾಕಷ್ಟು ಕಲಿತು ಈ ಮಟ್ಟಕ್ಕೆ ಬಂದಿದ್ದೇನೆ. ನನ್ನ ವೃತ್ತಿಜೀವನದಲ್ಲಿ ಹಲವು ಕಮರ್ಷಿಯಲ್ ಚಿತ್ರಗಳಲ್ಲಿ ನಟಿಸಿದ್ದೇನೆ. ಇದರಿಂದ ನನಗೆ ನಾಚಿಕೆಯಾಗುವುದಿಲ್ಲ. ಯಶಸ್ಸನ್ನು ಸಹ ಸಾಧಿಸಿದ್ದೇನೆ. ನನ್ನ ನೆಚ್ಚಿನ ಚಿತ್ರಗಳಿಗಾಗಿ ನಾನು ತುಂಬಾ ಶ್ರಮಿಸಿದ್ದೇನೆ. ಆದರೆ, ಅವು ಬಾಕ್ಸ್ ಆಫೀಸ್‌ನಲ್ಲಿ ವರ್ಕ್‌ಔಟ್ ಆಗಲಿಲ್ಲ ಎಂದು ಎಂದು ಶ್ರುತಿ ಹೇಳಿದರು.
ಇದೇ ಸಂದರ್ಭದಲ್ಲಿ ತಂದೆ ಕಮಲ್ ಹಾಸನ್ ನೀಡಿದ ಉಡುಗೊರೆಯನ್ನು ಆಕೆಯ ತಾಯಿ ಸಾರಿಕಾಗೆ ತೋರಿಸಿದರು. ಶ್ರುತಿ ಇದು ನನಗೆ ತುಂಬಾ ಸ್ಪೆಷಲ್ ಎಂದಳು. ಅದನ್ನು ನೋಡಿದಾಗ ನನಗೆ ಸ್ಫೂರ್ತಿಯಾಗುತ್ತದೆ ಎಂದು ಹೇಳಿದರು.
ಸಿನಿಮಾ ವಿಚಾರಕ್ಕೆ ಬಂದರೆ, ಶ್ರುತಿ ಅವರ ಕೈಯಲ್ಲಿ ಸದ್ಯ ಡಕಾಯಿತ್, ಸಲಾರ್ 2 ಹಾಗೂ ಕೂಲಿ ಸಿನಿಮಾಗಳಿವೆ. (ಏಜೆನ್ಸೀಸ್)