ಚಿರಂಜೀವಿ ಜತೆ ಶ್ರುತಿ; ಭೋಲಾ ಶಂಕರ್​ಗೆ ನಾಯಕಿ

Shruthi
Published on

ಶ್ರುತಿ ಹಾಸನ್​ಗೆ ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆಯಾಗುತ್ತಿವೆಯಾ? ಇಂಥದ್ದೊಂದು ಪ್ರಶ್ನೆ ಬರುವುದಕ್ಕೆ ಮುಖ್ಯ ಕಾರಣ, ಶ್ರುತಿ ತಮಗಿಂತ ದುಪ್ಪಟ್ಟು ವಯಸ್ಸಿನ ನಾಯಕರ ಜತೆಗೆ ನಾಯಕಿಯಾಗಿ ಅಭಿನಯಿಸುತ್ತಿರುವುದು. ಈಗಾಗಲೇ ಅವರು ತಮ್ಮ ತಂದೆಯ ಸಮಕಾಲೀನರಾದ ನಂದಮೂರಿ ಬಾಲಕೃಷ್ಣ ಅಭಿನಯದ ಹೊಸ ಚಿತ್ರದಲ್ಲಿ ನಾಯಕಿಯಾಗುವುದಕ್ಕೆ ಒಪ್ಪಿಕೊಂಡಿದ್ದರು.

ಈಗ ಚಿರಂಜೀವಿ ಅಭಿನಯದ ಹೊಸ ಚಿತ್ರಕ್ಕೂ ಶ್ರುತಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಚಿರಂಜೀವಿ ಒಪ್ಪಿಕೊಂಡಿರುವ ಹಲವು ಚಿತ್ರಗಳಲ್ಲಿ ‘ಭೋಲಾ ಶಂಕರ್’ ಸಹ ಒಂದು. ಚಿತ್ರತಂಡಕ್ಕೆ ಅವರನ್ನು ಸೋಷಿಯಲ್ ಮೀಡಿಯಾ ಮೂಲಕ ಬರಮಾಡಿಕೊಂಡಿರುವ ಚಿರಂಜೀವಿ, ‘ನೀವು ಈ ಚಿತ್ರಕ್ಕೆ ಶಕ್ತಿ ತುಂಬುತ್ತೀರಿ ಎಂಬ ನಂಬಿಕೆ ಇದೆ’ ಎಂದು ಹೇಳಿದ್ದಾರೆ. ಈ ಚಿತ್ರವನ್ನು ಮೆಹರ್ ರಮೇಶ್ ನಿರ್ದೇಶಿಸಲಿದ್ದು, ಚಿರಂಜೀವಿ ತಂಗಿಯ ಪಾತ್ರದಲ್ಲಿ ಕೀರ್ತಿ ಸುರೇಶ್ ಕಾಣಿಸಿಕೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net