

ಬೆಂಗಳೂರು: ‘ಬಿಗ್ಬಾಸ್’ ಮೂಲಕ ಖ್ಯಾತಿ ಪಡೆದ ನಟಿ, ಗಾಯಕಿ ಶ್ರುತಿ ಪ್ರಕಾಶ್ ಖುಷಿಯಲ್ಲಿದ್ದಾರೆ. ಅವರ ಖುಷಿಗೆ ಕಾರಣವಾಗಿದ್ದು, ಇತ್ತೀಚೆಗಷ್ಟೇ ಒಪ್ಪಿಕೊಂಡ ಹೊಸ ಸಿನಿಮಾ. ಹೌದು, ನಿರ್ದೇಶಕ ದಿನೇಶ್ ಬಾಬು ಕೆಲ ದಿನಗಳ ಹಿಂದಷ್ಟೇ ‘ಕಸ್ತೂರಿ’ ಹೆಸರಿನ ಸಿನಿಮಾ ಘೋಷಣೆ ಮಾಡಿದ್ದರು. ರಚಿತಾ ರಾಮ್ ಮುಖ್ಯಭೂಮಿಕೆಯಲ್ಲಿ ನಟಿಸುವುದು ಅಧಿಕೃತವಾಗಿತ್ತು. ಇದೀಗ ಇದೇ ಚಿತ್ರದ ಭಾಗವಾಗಿದ್ದಾರೆ ನಟಿ ಶ್ರುತಿ ಪ್ರಕಾಶ್.
‘ಮೊದಲಿಂದಲೂ ಬಹುತಾರಾಗಣದ ಸಿನಿಮಾದಲ್ಲಿ ನಟಿಸುವ ಆಸೆ ಇತ್ತು. ಹಾಗೆಯೇ, ಸ್ಟಾರ್ ನಿರ್ದೇಶಕರ ಜತೆ ಕೆಲಸಮಾಡುವ ಮನಸ್ಸಿತ್ತು. ಅದೆಲ್ಲವೂ ಇದೀಗ ಈ ಚಿತ್ರದಲ್ಲಿ ಕೂಡಿಬಂದಿದೆ. ತಾಂತ್ರಿಕವಾಗಿ ತುಂಬ ಸ್ಟ್ರಾಂಗ್ ಇರುವ ತಂಡದ ಜತೆ ಕೆಲಸ ಮಾಡಲು ಉತ್ಸುಕಳಾಗಿದ್ದೇನೆ’ ಎನ್ನುವ ಶ್ರುತಿ, ಈ ಚಿತ್ರದಲ್ಲಿ ಪ್ರಾಚ್ಯವಸ್ತು ಶಾಸ್ತ್ರಜ್ಞೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅಶೋಕ್ ಸ್ಕಂದಗೆ ಜೋಡಿಯಾಗಿ ಶ್ರುತಿ ಪಾತ್ರ ಸಾಗಲಿದ್ದು, ಅಕ್ಟೋಬರ್ ವೇಳೆಗೆ ಚಿತ್ರದ ಶೂಟಿಂಗ್ ಆರಂಭವಾಗಲಿದೆ.
ಇದಲ್ಲದೆ, ಪನ್ನಗ ಸೋಮಶೇಖರ್ ನಿರ್ದೇಶನದ ‘ಕಡಲ ತೀರದ ಭಾರ್ಗವ’ ಸಿನಿಮಾ ಕೆಲಸವನ್ನೂ ಮುಗಿಸಿರುವ ಅವರು, ಹಿಂದಿಯ ಧಾರಾವಾಹಿಯಲ್ಲಿಯೂ ನಟಿಸಲು ಸಜ್ಜಾಗುತ್ತಿದ್ದಾರೆ. ‘ಸಿನಿಮಾ ಜತೆಗೆ ಹಿಂದಿ ಸೀರಿಯಲ್ನಲ್ಲಿ ನಟಿಸಲು ಒಪ್ಪಿಕೊಂಡಿದ್ದೇನೆ. ಮುಂಬೈನಲ್ಲಿ ತಿಂಗಳಲ್ಲಿ 10 ದಿನ ಆ ಧಾರಾವಾಹಿಯ ಶೂಟಿಂಗ್ ನಡೆಯಲಿದೆ’ ಎನ್ನುತ್ತಾರೆ ಶ್ರುತಿ.
ಇನ್ನು ನಟನೆಯ ಜತೆಗೆ ಗಾಯನದಲ್ಲೂ ಗುರುತಿಸಿಕೊಂಡವರು ಶ್ರುತಿ, ‘ಲಾಕ್ಡೌನ್ ಸಮಯದಲ್ಲಿ ಬಹುಪಾಲು ಮನೆಯಲ್ಲಿಯೇ ಕಳೆದಿದ್ದರಿಂದ ಗಾಯನಕ್ಕೆ ಹೆಚ್ಚು ಸಮಯ ವ್ಯಯಿಸಿದ್ದೆ. ಕೆಲ ದಿನಗಳಲ್ಲಿ ಆ ಹಾಡುಗಳು ಹೊರಬರಲಿವೆ’ ಎಂದು ಹರ್ಷ ವ್ಯಕ್ತಪಡಿಸುತ್ತಾರೆ ಶ್ರುತಿ.
07