

ಚೆನ್ನೈ: ಕೆಲವು ತಿಂಗಳುಗಳ ಹಿಂದೆ ತಮ್ಮ 35ನೇ ಹುಟ್ಟುಹಬ್ಬದ ಸಂದರ್ಭದಲ್ಲಿ, ಕಮಲ್ ಹಾಸನ್ ಮಗಳು ಮತ್ತು ನಟಿ ಶ್ರುತಿ ಹಾಸನ್ ತಮ್ಮ ಬಾಯ್ಫ್ರೆಂಡ್ ಶಂತನು ಹಜಾರಿಕಾ ಅವರನ್ನು ತಮ್ಮ ಅಭಿಮಾನಿಗಳಿಗೆ ಸೋಷಿಯಲ್ ಮೀಡಿಯಾ ಮೂಲಕ ಪರಿಚಯಿಸಿಕೊಟ್ಟಿದ್ದರು. ಶಂತನು ತಮ್ಮ ಜೀವನದಲ್ಲಿ ಎಂಟ್ರಿಯಾದ ಮೇಲೆ ಸಾಕಷ್ಟು ಬದಲಾವಣೆಯಾಗಿದೆ ಎಂದು ಹೇಳಿಕೊಂಡಿದ್ದರು.
ಇದನ್ನೂ ಓದಿ: ರಜನಿಕಾಂತ್ ಬಗ್ಗೆ ಹೀಗೊಂದು ಹೊಸ ಜೋಕು …
ಇದೀಗ ಶ್ರುತಿ ಲಾಕ್ಡೌನ್ ಸಮಯದ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಬಾರಿ ಅವರೊಬ್ಬರೇ ಇಲ್ಲ, ಶಂತನು ಸಹ ಇದ್ದಾರೆ. ಕಳೆದ ವರ್ಷ ಲಾಕ್ಡೌನ್ ಸಮಯದಲ್ಲಿ ಮನೆಯಲ್ಲಿ ಒಂಟಿಯಾಗಿದ್ದ ಶ್ರುತಿ ಜತೆಗೆ, ಈ ಬಾರಿ ಅವರ ಬಾಯ್ಫ್ರೆಂಡ್ ಶಂತನು ಸಹ ಸೇರಿಕೊಂಡಿದ್ದಾರೆ. ಶಂತನು ಜತೆಗಿರುವ ಒಂದಿಷ್ಟು ಫೋಟೋಗಳನ್ನು ಹಂಚಿಕೊಂಡಿರುವ ಶ್ರುತಿ, ಲಾಕ್ಡೌನ್ ವಿಥ್ ಮೈ ಬೆಸ್ಟಿ ಎಂಬ ಕ್ಯಾಪ್ಶನ್ ಸಹ ಕೊಟ್ಟಿದ್ದಾರೆ.
ಇನ್ನು, ಕೆಲವೇ ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಶ್ರುತಿ ಹಾಸನ್, ಲಾಕ್ಡೌನ್ ಮುಗಿಯುವುದನ್ನೇ ಕಾಯುತ್ತಿರುವುದಾಗಿ ಹೇಳಿದ್ದರು. ನನಗೆ ನಮ್ಮಪ್ಪ-ಅಮ್ಮ ಪಾಕೆಟ್ಮನಿ ಕೊಡುವುದಿಲ್ಲ. ನಮ್ಮನ್ನು ನಾವೇ ನೋಡಿಕೊಳ್ಳಬೇಕು. ಒಂದಿಷ್ಟು ಕಮಿಟ್ಮೆಂಟ್ಗಳಿರುವುದರಿಂದ ಕೆಲಸ ಮಾಡಲೇಬೇಕಿದ್ದು, ಆದಷ್ಟು ಬೇಗ ಲಾಕ್ಡೌನ್ ಮುಗಿಯುವುದಕ್ಕೆ ಮತ್ತು ಕೆಲಸ ಮಾಡುತ್ತಿರುವುದಕ್ಕೆ ಕಾಯುತ್ತಿರುವುದಾಗಿ ಶ್ರುತಿ ಹೇಳಿಕೊಂಡಿದ್ದರು.
ಕಳೆದ ತಿಂಗಳು ಶ್ರುತಿ ಹಾಸನ್ ಅಭಿನಯದ ವಕೀಲ್ ಸಾಬ್ ಬಿಡುಗಡೆಯಾಗಿದ್ದು, ಪ್ರಭಾಸ್ ಅಭಿನಯದ ಸಲಾರ್ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಒಂದಿಷ್ಟು ಮುಗಿದಿದ್ದು, ಸದ್ಯ ಲಾಕ್ಡೌನ್ನಿಂದಾಗಿ ನಿಂತಿದೆ.