

ಬೆಂಗಳೂರು: ‘ಹೆಡ್ ಬುಷ್’ ಚಿತ್ರದ ಮೂಲಕವೇ ಕನ್ನಡ ಚಿತ್ರರಂಗಕ್ಕೆ ಶ್ರುತಿ ಹರಿಹರನ್ ರೀ ಎಂಟ್ರಿಯಾಗಿತ್ತು. ಆ ನಂತರ ಅವರು ಯಾವೊಂದು ಚಿತ್ರವನ್ನೂ ಒಪ್ಪಿಕೊಂಡಿರಲಿಲ್ಲ. ಈಗ ರಕ್ಷಿತ್ ಶೆಟ್ಟಿ ನಿರ್ವಣದ ‘ಸ್ಟ್ರಾಬೆರ್ರಿ’ ಎಂಬ ಇನ್ನೊಂದು ಹೊಸ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ.
ಪರಂವಾ ಸ್ಟುಡಿಯೋಸ್ ಅಲ್ಲದೆ ಬೇರೆ ನಿರ್ಮಾಣ ಸಂಸ್ಥೆಗಳ ಮೂಲಕವೂ ಒಂದಿಷ್ಟು ಹೊಸ ಚಿತ್ರಗಳನ್ನು ನಿರ್ವಿುಸುವುದಾಗಿ ರಕ್ಷಿತ್ ಶೆಟ್ಟಿ ಹೇಳಿಕೊಂಡಿದ್ದರು. ಅದರಂತೆ ಈಗ ಪರಂವಾ ಸ್ಪಾಟ್ಲೈಟ್ ಎಂಬ ಸಂಸ್ಥೆ ಹುಟ್ಟುಹಾಕಿರುವ ಅವರು, ಅದರಡಿ ಮೊದಲ ಚಿತ್ರವಾಗಿ ‘ಸ್ಟ್ರಾಬೆರ್ರಿ’ ನಿರ್ವಿುಸುತ್ತಿದ್ದಾರೆ.
ಈ ಚಿತ್ರದಲ್ಲಿ ಶ್ರುತಿ ಹರಿಹರನ್, ಅಮೃತಾ ಎಂಬ ಲೈಂಗಿಕ ಕಾರ್ಯಕರ್ತೆಯ ಪಾತ್ರ ನಿರ್ವಹಿಸುತ್ತಿದ್ದಾರಂತೆ. ತಾಯಿಯ ಪ್ರೀತಿಯನ್ನು ಕಳೆದುಕೊಡ ಅಮೃತಾ, ಮತ್ತೊಮ್ಮೆ ಅಂತಹ ಪ್ರೀತಿಯ ಭರವಸೆ ಸಿಕ್ಕಾಗ, ಕಡಲನ್ನು ಸೇರಲು ಹೊರಟ ನದಿಯಂತೆ ಹೊರಡುವ ಕಥೆ ಈ ಚಿತ್ರದ್ದು.
‘ಸ್ಟ್ರಾಬೆರ್ರಿ’ಯನ್ನು ನಿರ್ದೇಶಿಸುತ್ತಿರುವವರು ಅರ್ಜುನ್ ಲೂಯಿಸ್. ನಿರ್ದೇಶಕರಾಗಿ ಇದು ಅವರ ಮೊದಲ ಚಿತ್ರ. ಈಗಾಗಲೇ ಚಿತ್ರದ ಚಿತ್ರೀಕರಣ ಸದ್ದಿಲ್ಲದೆ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಪ್ರಸಾದ್ ಶೆಟ್ಟಿ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ಜೋಯಲ್ ಶಮನ್ ಡಿಸೋಜಾ ಛಾಯಾಗ್ರಹಣ ಮಾಡಿದ್ದಾರೆ.
ಶ್ರುತಿ ಹರಿಹರನ್ ಅಲ್ಲದೆ, ‘ದಿಯಾ’ ಖ್ಯಾತಿಯ ದೀಕ್ಷಿತ್ ಶೆಟ್ಟಿ ಮತ್ತು ‘ಒಂದು ಮೊಟ್ಟೆಯ ಕಥೆ’ಯ ವಿನೀತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.