ಕೆಲಸ ಮತ್ತು ಕಟೌಟ್​ನ ಮಹತ್ವ ಗೊತ್ತಾಯ್ತು; 'ರಾಣ' ಕುರಿತು ಶ್ರೇಯಸ್​ ಮಾತು

Raana 1 - Final
Published on

ಬೆಂಗಳೂರು: ಮೊದಲ ಚಿತ್ರ 'ಪಡ್ಡೆಹುಲಿ' ಬಿಡುಗಡೆಯಾಗಿ ಮೂರೂವರೆ ವರ್ಷಗಳ ನಂತರ ಹಿರಿಯ ನಿರ್ಮಾಪಕ ಕೆ. ಮಂಜು ಮಗ ಶ್ರೇಯಸ್​ ಅಭಿನಯದ ಚಿತ್ರವೊಂದು ಬಿಡುಗಡೆಯಾಗುತ್ತಿದೆ. ಈ ಮಧ್ಯೆ, 'ವಿಷ್ಣು ಪ್ರಿಯಾ' ಎಂಬ ಚಿತ್ರದಲ್ಲಿ ಶ್ರೇಯಸ್​ ನಟಿಸಿದ್ದರೂ, ಆ ಚಿತ್ರ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಅದಕ್ಕೂ ಮೊದಲು ಶ್ರೇಯಸ್​ ಅಭಿನಯದ 'ರಾಣ' ಅವರ ಎರಡನೆಯ ಚಿತ್ರವಾಗಿ ಈ ಶುಕ್ರವಾರ (ನ.11) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಈ ಚಿತ್ರದ ಮೇಲೆ ಶ್ರೇಯಸ್​ ಬಹಳ ನಿರೀಕ್ಷೆಗಳನ್ನಿಟ್ಟಿದ್ದಾರೆ. ಅಷ್ಟೇ ಅಲ್ಲ, ಬಹಳ ಕಲಿತಿದ್ದಾಗಿ ಹೇಳುತ್ತಾರೆ. ಅದರಲ್ಲೂ ಸಮಯ, ಕೆಲಸ ಮತ್ತು ಕಟೌಟ್​ನ ಬೆಲೆ ಏನು ಎಂದು ಅವರಿಗೆ ಈ ಚಿತ್ರದಿಂದ ಅರ್ಥವಾಗಿದೆಯಂತೆ.

ಈ ಕುರಿತು 'ವಿಜಯವಾಣಿ' ಜತೆಗೆ ಮಾತನಾಡಿದ ಶ್ರೇಯಸ್​. 'ಕರೊನಾ ಸಮಯದಲ್ಲಿ ಸುಮ್ಮನೆ ಮನೆಯಲ್ಲಿ ಕುಳಿತಾಗ, ಕೆಲಸ ಎಷ್ಟು ಮುಖ್ಯ ಎಂದು ಗೊತ್ತಾಯಿತು. ಹಾಗಾಗಿ, ಇದೇ ನನ್ನ ಕೊನೆಯ ಚಿತ್ರ ಎಂಬಂತೆ ಕೆಲಸ ಮಾಡಿದ್ದೇನೆ. ಮೊದಲ ಚಿತ್ರ ಮಾಡಿದ್ದು ಅಷ್ಟು ಗೊತ್ತಾಗಲಿಲ್ಲ. ಬಹಳ ಸುಲಭವಾಗಿ ಆ ಚಿತ್ರ ಮುಗಿದು ಹೋಯ್ತು. ಅದಾಗಿ ಮೂರೂವರೆ ವರ್ಷಗಳ ನಂತರ ಇನ್ನೊಂದು ಚಿತ್ರದ ಬಿಡುಗಡೆಗಾಗಿ ಕಾದಿದ್ದೇನೆ. ಚಿತ್ರಮಂದಿರದ ಎದುರು ನನ್ನ ಕಟೌಟ್​ ಯಾವಾಗ ನಿಲ್ಲಿಸಲಾಗುತ್ತದೆ ಎಂದು ಕಾಯುತ್ತಿದ್ದೇನೆ. ಮುಂಚೆ ನನಗೆ ಇದರ ಮಹತ್ವ ಗೊತ್ತಾಗುತ್ತಿರಲಿಲ್ಲ. ಆದರೆ, ಕರೊನಾ ಮತ್ತು ಮೂರೂವರೆ ವರ್ಷಗಳ ಗ್ಯಾಪ್​ನಿಂದಾಗಿ ಸಮಯ, ಕೆಲಸ ಮತ್ತು ಕಟೌಟ್​ನ ಬೆಲೆ ಅರ್ಥವಾಗಿದೆ' ಎನ್ನುತ್ತಾರೆ ಶ್ರೇಯಸ್​.

'ರಾಣ' ಒಂದು ಆಕ್ಷನ್​ ಥ್ರಿಲ್ಲರ್​ ಚಿತ್ರ ಎನ್ನುವ ಶ್ರೇಯಸ್​. 'ಕಥೆ ಬಹಳ ಚೆನ್ನಾಗಿದೆ. ಹಾಗಾಗಿ ಚಿತ್ರ ಕೂಡಾ ಚೆನ್ನಾಗಿ ಕಾಣಿಸುತ್ತಿದೆ. ಇದು ಒಂದು ರಾತ್ರಿಯಲ್ಲಿ ನಡೆಯುವ ಒಂದು ಕಥೆ. ಕಮರ್ಷಿಯಲ್​ ಸಿನಿಮಾ ಆದರೂ ಕಂಟೆಂಟ್​ ಇರುವ ಸಿನಿಮಾ ಇದು. ಹಳ್ಳಿ ಹುಡುಗನೊಬ್ಬ ಸ್ನೇಹಿತರಿಗೆ ಸಹಾಯ ಮಾಡುವುದಕ್ಕೆ ಹೋದಾಗ, ಏನೆಲ್ಲ ಆಗುತ್ತದೆ ಎಂಬುದು ಚಿತ್ರದ ಕಥೆ' ಎಂದು ಚಿತ್ರದ ಒಂದೆಳೆಯನ್ನು ಮಾತ್ರ ಹೇಳುತ್ತಾರೆ ಶ್ರೇಯಸ್​.

ಈ ಚಿತ್ರದಲ್ಲಿ ಆಕ್ಷನ್​ ದೃಶ್ಯಗಳು ಹೈಲೈಟ್​ ಅಂತೆ. 'ನನ್ನ ಮೊದಲ ಸಂಗೀತಮಯ ಚಿತ್ರವಾಗಿತ್ತು. ಎರಡನೆಯದು ಲವ್​ಸ್ಟೋರಿ. ಇದು ಪಕ್ಕಾ ಆಕ್ಷನ್​ ಚಿತ್ರ. ಆಕ್ಷನ್​ ದೃಶ್ಯಗಳು ಜಾಸ್ತಿಯೇ ಇದೆ. ಹಿಂದಿನ ಎರಡು ಚಿತ್ರಗಳಿಗೆ ಹೋಲಿಸಿದರೆ ಸಾಕಷ್ಟು ಶ್ರಮ ಹಾಕಿದ್ದೇನೆ. ಹಾಗೆಯೇ, ಪ್ರತಿದಿನ ಏಟು ತಿಂದಿದ್ದೇನೆ. ಪ್ರತಿಯೊಂದು ಫ್ರೇಮ್​ ನೋಡಿದರೂ ಮೈ ಜುಂ ಎಂದನಿಸುತ್ತದೆ. ರವಿವರ್ಮ, ಡಿಫರೆಂಟ್​ ಡ್ಯಾನಿ ಮತ್ತು ಗಣೇಶ್​ ಸಾಹಸ ನಿರ್ದೇಶನ ಮಾಡಿದ್ದಾರೆ' ಎಂದು ಮಾಹಿತಿ ಕೊಡುತ್ತಾರೆ.

'ರಾಣ' ಚಿತ್ರದಲ್ಲಿ ಶ್ರೇಯಸ್​ಗೆ ನಾಯಕಿಯರಾಗಿ ರೀಷ್ಮಾ ನಾಣಯ್ಯ ಇದ್ದಾರೆ. ಸಂಯುಕ್ತಾ ಹೆಗ್ಡೆ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಗಿರಿ, ಅಶೋಕ್​ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪುರುಷೋತ್ತಮ್​ ಗುಜ್ಜಾಲ್​ ನಿರ್ಮಿಸಿರುವ ಈ ಚಿತ್ರವನ್ನು ನಂದಕಿಶೋರ್​ ನಿರ್ದೇಶನ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net