

ಬಾಲಿವುಡ್ನಲ್ಲಿ ಈವರೆಗೂ ಶ್ರದ್ಧಾ ಕಪೂರ್ ಮತ್ತು ಕಾರ್ತಿಕ್ ಆರ್ಯನ್ ಒಟ್ಟಿಗೆ ಒಂದೇ ಸಿನಿಮಾದಲ್ಲಿ ನಟಿಸಿಲ್ಲ. ಬೇರೆ ಬೇರೆ ಪ್ರಾಜೆಕ್ಟ್ಗಳಲ್ಲಿ ಈ ಇಬ್ಬರ ಹೆಸರುಗಳು ತಳುಕು ಹಾಕಿಕೊಂಡರೂ ಯಾವುದು ಅಧಿಕೃತವಾಗಿರಲಿಲ್ಲ. ಇದೀಗ ಹೊಸ ಸಿನಿಮಾದಲ್ಲಿ ನಟಿಸಲು ಈ ಜೋಡಿಯಿಂದ ಹಸಿರು ನಿಶಾನೆ ಸಿಕ್ಕಿದೆಯಂತೆ. ಆ ಚಿತ್ರದ ಹೆಸರು ‘ಸತ್ಯನಾರಾಯಣ್ ಕೀ ಕಥಾ’. ಹಿಂದೆಂದೂ ಒಂದಾಗದ ಜೋಡಿಯನ್ನೇ ತೆರೆಮೇಲೆ ತರಬೇಕೆಂಬ ಪ್ಲಾನ್ ನಿರ್ವಪಕ ಸಾಜಿದ್ ನಾಡಿಯಾದ್ವಾಲಾ ಅವರದ್ದಾಗಿತ್ತು. ಅದರಂತೆ, ಕಾರ್ತಿಕ್ಗೆ ಜೋಡಿಯಾಗಿ ಶ್ರದ್ಧಾ ಅವರನ್ನು ಆಯ್ಕೆ ಮಾಡಿದ್ದಾರಂತೆ.
ಚಿತ್ರದ ಒಂದೆಳೆ ಕೇಳಿಯೇ ಥ್ರಿಲ್ ಆಗಿರುವ ಶ್ರದ್ಧಾ, ನಟಿಸುವ ಬಗ್ಗೆ ಒಪ್ಪಿಗೆ ಸೂಚಿಸಿದ್ದಾರಂತೆ. ಈ ಮೂಲಕ, ಸುಮಾರು ಒಂದೂವರೆ ವರ್ಷಗಳ ನಂತರ ಅವರು ಹೊಸದೊಂದು ಚಿತ್ರ ಒಪ್ಪಿಕೊಂಡಂತಾಗಿದೆ. ಕಳೆದ ವರ್ಷ ಲಾಕ್ಡೌನ್ ಮುಗಿದ ಮೇಲೆ ಬೇರೆ ನಟಿಯರೆಲ್ಲ ಒಂದಿಷ್ಟು ಹೊಸ ಚಿತ್ರಗಳನ್ನು ಒಪ್ಪಿಕೊಂಡು ಚಿತ್ರೀಕರಣದಲ್ಲಿ ತೊಡಗಿಸಿಕೊಂಡರೂ, ಶ್ರದ್ಧಾ ಮಾತ್ರ ಮನೆ ಬಿಟ್ಟು ಹೊರಬರಲಿಲ್ಲ. ಕರೊನಾ ಭಯದಿಂದ ತಮ್ಮ ಮಗಳನ್ನು ಕಳಿಸುವುದಕ್ಕೆ ಶ್ರದ್ಧಾ ತಂದೆ ಶಕ್ತಿ ಕಪೂರ್ ಒಪ್ಪಿರಲಿಲ್ಲ. ಈಗ ಪರಿಸ್ಥಿತಿ ಸ್ವಲ್ಪ ಸುಧಾರಿಸುತ್ತಿದ್ದಂತೆ, ತಮ್ಮ ಮಗಳಿಗೆ ಆಚೆ ಹೋಗುವುದಕ್ಕೆ ಶಕ್ತಿ ಕಪೂರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದರಂತೆ, ಶ್ರದ್ಧಾ ಇದೀಗ ‘ಸತ್ಯನಾರಾಯಣ್ ಕೀ ಕಥಾ’ ಚಿತ್ರ ಒಪ್ಪಿಕೊಂಡಿದ್ದು, ಸದ್ಯದಲ್ಲೇ ಶೂಟಿಂಗ್ಗೆ ಹಾಜರಾಗಲಿದ್ದಾರೆ.