

‘ಇನ್ನೆಂದೂ ಅಂತಹ ಗ್ಲಾಮರಸ್ ಅವತಾರದಲ್ಲಿ ಕಾಣಿಸಿಕೊಳ್ಳುವುದಿಲ್ಲ ...’ ಹಾಗಂತ ಎರಡು ವರ್ಷಗಳ ಹಿಂದೆ ಹೇಳಿಕೊಂಡಿದ್ದರು ರಚಿತಾ ರಾಮ್ ಅದಕ್ಕೆ ಕಾರಣವಾಗಿದ್ದು ‘ಐ ಲವ್ ಯೂ’ ಚಿತ್ರದ ಒಂದು ಹಾಡು. ಈ ಹಾಡಿನಲ್ಲಿ ಸಿಕ್ಕಾಪಟ್ಟೆ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದರಿಂದ, ಈ ಬಗ್ಗೆ ಅವರ ತಂದೆ ಬೇಸರ ವ್ಯಕ್ತಪಡಿಸಿದ್ದರಂತೆ. ಆದೇ ಕಾರಣಕ್ಕೆ ರಚಿತಾ ಆ ಮಾತು ಹೇಳಿದ್ದರು. ಆದರೆ, ಇತ್ತೀಚೆಗೆ ಬಿಡುಗಡೆಯಾಗಿರುವ ‘ಲವ್ ಯೂ ರಚ್ಚು’ ಚಿತ್ರದ ಹೊಸ ಹಾಡಿನಲ್ಲಿ ರಚಿತಾ ಮತ್ತೊಮ್ಮೆ ಗ್ಲಾಮರಸ್ ಆಗಿ ಮಿಂಚಿದ್ದಾರೆ. ಹಾಗಾದರೆ, ಈ ಹಿಂದೆ ಮಾಡಿದ ಶಪಥ ಮರೆತೇ ಹೋಯಿತಾ? ಎಂಬ ಪ್ರಶ್ನೆ ಸಹಜ.
ಈ ಪ್ರಶ್ನೆಯನ್ನು ಅವರ ಮುಂದಿಟ್ಟರೆ, ‘ಮಾಡಲ್ಲ ಎಂದು ಹೇಳಿದ್ದೆ. ಮಾಡಿದ್ದೀನಿ ಎಂದರೆ ಅದಕ್ಕೆ ಏನೋ ಬಲವಾದ ಕಾರಣ ಇದ್ದೇ ಇರುತ್ತದೆ. ಮದುವೆಯಾದ ಮೇಲೆ ಫಸ್ಟ್ನೈಟ್ನಲ್ಲಿ ಏನು ಮಾಡುತ್ತಾರೆ? ರೊಮಾನ್ಸ್ ಮಾಡುತ್ತಾರೆ. ನಾವು ಅದನ್ನೇ ಮಾಡಿದ್ದೇವೆ. ಈ ತರಹದ ದೃಶ್ಯಗಳನ್ನು ಮಾಡುವುದಿಲ್ಲ ಎಂದು ಹೇಳಿದ್ದರೂ, ಮಾಡಿರುವುದಕ್ಕೆ ಒಂದು ಕಾರಣ ಇದೆ. ಅದನ್ನು ನೀವು ತೆರೆಯ ಮೇಲೆ ನೋಡಬೇಕು’ ಎನ್ನುತ್ತಾರೆ ರಚಿತಾ.
ಅವರು ಹೀಗೆ ಮಾತನಾಡಿದ್ದು ಅಜಯ್ ರಾವ್ ನಾಯಕನಾಗಿ ನಟಿಸಿರುವ ‘ಲವ್ ಯೂ ರಚ್ಚು’ ಚಿತ್ರದ ‘ಮುದ್ದು ನೀನೇ ...’ ಹಾಡಿನ ಬಿಡುಗಡೆಯ ಸಮಾರಂಭದಲ್ಲಿ. ಚಿತ್ರದ ಬಗ್ಗೆ, ಚಿತ್ರತಂಡದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು ರಚಿತಾ. ಪುನೀತ್ ಅವರನ್ನೂ ನೆನಪಿಸಿಕೊಂಡರು.
ಕಲಿಯುವುದು ಸಾಕಷ್ಟು ಇದೆ: ‘ಪುನೀತ್ ಅವರ ಜೀವನದಿಂದ ಬಹಳ ಕಲಿಯುವುದಿದೆ. ಅವರು ಕೆಲವು ವಿಷಯಗಳನ್ನು ಹೇಳದೆಯೇ ಹೇಳಿಕೊಟ್ಟು ಹೋಗಿದ್ದಾರೆ. ಜೀವನ ಬಹಳ ಅನಿರೀಕ್ಷಿತ. ಇರುವಷ್ಟು ದಿನ ಖುಷಿಯಾಗಿರೋಣ. ಹಳೆಯದನ್ನು ಮರೆತು ಎಲ್ಲರೂ ಚೆನ್ನಾಗಿರೋಣ. ಯಾರ ಜತೆಗೂ ಜಿದ್ದು, ದ್ವೇಷ, ಇಗೋ ಬೇಡ. ಹಳೆಯದನ್ನು ಮರೆತು ಮುಂದೆ ಹೋಗೋಣ. ಇರುವುದು ಒಂದೇ ಜೀವನ. ಖುಷಿಯಾಗಿರೋಣ ಮತ್ತು ಇದ್ದಷ್ಟು ದಿನ ಖುಷಿ ಪಡಿಸೋಣ. ತಂದೆ-ತಾಯಿಯನ್ನು, ಜತೆಗಿರುವವರನ್ನು ಚೆನ್ನಾಗಿ ನೋಡಿಕೊಳ್ಳೋಣ. ಇದನ್ನು ಅರ್ಥ ಮಾಡಿಕೊಂಡು ಜೀವನ ಮಾಡಿಕೊಂಡು ಹೋದರೆ ಬಹಳ ಚೆನ್ನಾಗಿರುತ್ತದೆ. ಅರ್ಥ ಮಾಡಿಕೊಳ್ಳುವುದಷ್ಟೇ ಅಲ್ಲ, ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎನ್ನುತ್ತಾರೆ ಅವರು.
ಬಿಡುಗಡೆಗೆ ಸಾಲುಸಾಲು ಚಿತ್ರಗಳು: ‘100’ ಚಿತ್ರದಿಂದ ಪ್ರಾರಂಭಿಸಿ, ರಚಿತಾ ಅಭಿನಯದ ಸಾಕಷ್ಟು ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿವೆ. ‘ಲಾಕ್ಡೌನ್ ಮುಂಚೆ ಕೆಲವು ಚಿತ್ರಗಳನ್ನು ಒಪ್ಪಿದ್ದೆ. ಎರಡು ವರ್ಷಗಳ ಕಾಲ ಯಾವ ಚಿತ್ರವೂ ಬಿಡುಗಡೆಯಾಗದ ಕಾರಣ, ಅವೆಲ್ಲ ಈಗ ಒಂದರ ಹಿಂದೊಂದು ಬಿಡುಗಡೆಯಾಗುತ್ತಿವುದರಿಂದ ಸಿಕ್ಕಾಪಟ್ಟೆ ಚಿತ್ರಗಳನ್ನು ಮಾಡುತ್ತಿದ್ದೇನೆ ಎಂದನಿಸುತ್ತದೆ. ನನಗೆ ವಿಭಿನ್ನ ಪಾತ್ರಗಳನ್ನು, ಪ್ರಯೋಗಗಳನ್ನು ಮಾಡುವಾಸೆ. ಅದೇ ಕಾರಣಕ್ಕೆ, ಒಳ್ಳೆಯ ಪಾತ್ರ ಮತ್ತು ಚಿತ್ರ ಬಂದರೆ ತಕ್ಷಣ ಒಪ್ಪಿಕೊಳ್ಳುತ್ತೇನೆ. ಮಿಸ್ ಆದರೆ, ಬೇರೆಯವರಿಗೆ ಹೊರಟುಹೋಗುತ್ತದೆ ಎಂಬ ಸ್ವಾರ್ಥ. ಅವಕಾಶ ಸಿಕ್ಕಿದಾಗ, ಯಾಕೆ ಮಾಡಬಾರದು ಎಂದು ಒಪ್ಪಿಕೊಳ್ಳುತ್ತೇನೆ’ ಎನ್ನುತ್ತಾರೆ ರಚಿತಾ ರಾಮ್.