

ಬೆಂಗಳೂರು: ಕಳೆದ ವರ್ಷದ ವಿಶ್ವ ಎಡಚರ ದಿನದಂದು ಘೋಷಣೆಯಾಗಿತ್ತು ದಿಗಂತ್ ಅಭಿನಯದ ‘ಎಡಗೈ ಅಪಘಾತಕ್ಕೆ ಕಾರಣ’ ಎಂಬ ಚಿತ್ರ’. ಅಂದು ಶೀರ್ಷಿಕೆ ಪೋಸ್ಟರ್ ಸಹ ಬಿಡುಗಡೆ ಮಾಡಲಾಗಿತ್ತು. ಇನ್ನು, ಈ ವರ್ಷ ವಿಶ್ವ ಎಡಚರ ದಿನ ದಂದು ನಾಯಕಿಯ ಪರಿಚಯ ಮಾಡಿಕೊಡಲಾಗಿತ್ತು. ಇದೀಗ ಚಿತ್ರದ ಮುಹೂರ್ತ ಶುಕ್ರವಾರ ಬೆಳಗ್ಗೆ ಬೆಂಗಳೂರಿನ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ನೆರವೇರಿದೆ.
ಈ ಸಂದರ್ಭದಲ್ಲಿ ದಿಗಂತ್, ನಾಯಕಿ ಧನು ಹರ್ಷ, ನಿರ್ದೇಶಕ ಸಮರ್ಥ್ ಬಿ ಕಡಕೋಳ್, ನಿರ್ಮಾಪಕ ಗುರುದತ್ ಗಾಣಿಗ ಸೇರಿದಂತೆ ಹಲವರು ಹಾಜರಿದ್ದರು. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು, ಪ್ರಪಂಚದಲ್ಲಿ ಹಲವು ವಿಷಯಗಳನ್ನು ಬಲಗೈ ಬಳಕೆಗೆ ಅನುಕೂಲವಾಗಿರುವಂತೆ ಮಾಡಲಾಗಿರುತ್ತದೆ. ಎಡಗೈ ಬಳಕೆದಾರರ ಸಂಖ್ಯೆ ಕಡಿಮೆ ಇದ್ದು, ಇದರಿಂದ ಅವರಿಗೆ ಒಂದಿಷ್ಟು ತೊಂದರೆಗಳು ಎದುರಾಗುತ್ತವೆ. ಈ ವಿಷಯವನ್ನು ಕ್ರೖೆಮ್ ಹಿನ್ನೆಲೆಯಲ್ಲಿ ಹೇಳಲಾಗುತ್ತಿದೆ. ಈ ಚಿತ್ರಕ್ಕೆ ಸಮರ್ಥ್ ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ರಚಿಸಿದ್ದಾರೆ. ಚಿತ್ರಕ್ಕೆ ಅಭಿಮನ್ಯು ಸದಾನಂದ್ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ.