ಕೊನೆಗೂ 'ಆದಿಪುರುಷ್​' ಚಿತ್ರದ ಚಿತ್ರೀಕರಣ ಪ್ರಾರಂಭ

Aadipurush - Final
Published on

ಮುಂಬೈ: ಪ್ರಭಾಸ್​ ಅಭಿನಯದ ‘ಆದಿಪುರುಷ್​’ ಚಿತ್ರದ ಕುರಿತಾಗಿ ಕಳೆದ ನಾಲ್ಕೈದು ತಿಂಗಳುಗಳಿಂದ ಸುದ್ದಿ ಕೇಳಿ ಬರುತ್ತಲೇ ಇತ್ತು. ಅದಂತೆ, ಇದಂತೆ, ಹಾಗಂತೆ, ಹೀಗಂತೆ ಎಂಬ ಸುದ್ದಿಗಳ ಮಧ್ಯೆ ಚಿತ್ರ ಯಾವಾಗ ಆರಂಭವಾಗಬಹುದು ಎಂಬ ಗೊಂದಲ ಎಲ್ಲರಲ್ಲೂ ಇತ್ತು. ಇದೀಗ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದ್ದು, ಈ ಕುರಿತು ಸ್ವತಃ ನಾಯಕ ಪ್ರಭಾಸ್​ ಕನ್ಫರ್ಮ್​ ಮಾಡಿದ್ದಾರೆ.

ಈ ಕುರಿತು ಮಂಗಳವಾರ ಬೆಳಿಗ್ಗೆ ತಮ್ಮ ಇನ್​ಸ್ಟಾಗ್ರಾಂ ಅಕೌಂಟ್​ ಮೂಲಕ ಹೊಸ ಮೆಸೇಜ್​ ಪೋಸ್ಟ್​ ಮಾಡಿರುವ ಪ್ರಭಾಸ್​, 'ಆದಿಪುರುಷ್​ ಆರಂಭ್​' ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದೆ ಎಂದು ತಿಳಿಸಿದ್ದಾರೆ.

ಕಳೆದ ವಾರವಷ್ಟೇ ಪ್ರಭಾಸ್​, ಪ್ರಶಾಂತ್​ ನೀಲ್​ ನಿರ್ದೇಶನದ 'ಸಲಾರ್​' ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಸದ್ಯದಲ್ಲೇ ಅವರು 'ಆದಿಪುರುಷ್​'ನ ಮೊದಲ ಹಂತದ ಚಿತ್ರೀಕರಣದಲ್ಲಿ ಅವರು ಭಾಗವಹಿಸಲಿದ್ದಾರೆ.

'ಆದಿಪುರುಷ್​' ಚಿತ್ರದ ಚಿತ್ರೀಕರಣ ಇಂದಿನಿಂದ ಪ್ರಾರಂಭವಾದರೂ, ಈಗಾಗಲೇ ಬಿಡುಗಡೆಯ ದಿನಾಂಕ ಫಿಕ್ಸ್​ ಆಗಿದೆ. ಚಿತ್ರವು ಮುಂದಿನ ವರ್ಷ ಅಂದರೆ 2022ರ ಆಗಸ್ಟ್​ 11ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಹೆಚ್ಚಿನ ಪ್ರಮಾಣದ ಗ್ರಾಫಿಕ್ಸ್ ಇರಲಿದ್ದು, ಅದಕ್ಕಾಗಿಯೇ ಹೆಚ್ಚಿನ ಸಮಯವನ್ನು ತಂಡ ಮೀಸಲಿಡಬೇಕಿದೆ. ಬರೀ ಸಮಯವಷ್ಟೇ ಅಲ್ಲ, ಚಿತ್ರದ ಬಜೆಟ್​ನಲ್ಲೂ ಅರ್ಧದಷ್ಟು ದುಡ್ಡನ್ನು ಬರೀ ವಿಎಫ್​ಎಕ್ಸ್​ಗೆ ಮೀಸಲಿಡಲಾಗುತ್ತಿದೆ.

‘ಆದಿಪುರುಷ್​’ ಚಿತ್ರವು ರಾಮಾಯಣವನ್ನಾಧರಿಸಿದ್ದು, ಈ ಚಿತ್ರವನ್ನು ಟಿ-ಸೀರೀಸ್​ನ ಭೂಷಣ್​ ಕುಮಾರ್​ ನಿರ್ಮಿಸುತ್ತಿದ್ದಾರೆ. ಅಜಯ್​ ದೇವಗನ್​ ಅಭಿನಯದ 'ತಾನ್ಹಾಜಿ' ನಿರ್ದೇಶಿಸಿದ್ದ ಓಂ ರೌತ್​ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಪ್ರಭಾಸ್​ ಅವರು ರಾಮನ ಪಾತ್ರವನ್ನು ಮಾಡಿದರೆ, ರಾವಣನ ಪಾತ್ರದಲ್ಲಿ ಸೈಫ್​ ಅಲಿ ಖಾನ್​ ಕಾಣಿಸಿಕೊಳ್ಳುತ್ತಿದ್ದಾರೆ. ಸೀತೆಯ ಪಾತ್ರದಲ್ಲಿ ಕೃತಿ ಸನಾನ್​ ಅಭಿನಯಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net