ಆಡಿಷನ್​ಗೆ ತೆರಳುವಾಗ ಸೈಕೋಗಳ ದಾಳಿ; ‘ಅಂಜು’ ಚಿತ್ರದಲ್ಲಿ ಹೀಗೊಂದು ಟ್ವಿಸ್ಟ್​!

Anju
Published on

ಬೆಂಗಳೂರು: ಟೆನ್‍ಟ್ರೀಸ್ ಫಿಲಂ ಪ್ರೊಡಕ್ಷನ್ ಹೌಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಅಂಜು’ ಚಲನಚಿತ್ರಕ್ಕೆ ಇತ್ತೀಚೆಗೆ ಚಿಂತಾಮಣಿಯ ಶ್ರೀಪ್ರಸನ್ನ ಆಂಜನೇಯಸ್ವಾಮಿ ದೇವಾಲಯದಲ್ಲಿ ಮುಹೂರ್ತ ಸಮಾರಂಭ  ನೆರವೇರಿತು. ಖೇಲ್ ಚಲನಚಿತ್ರದ ನಿರ್ಮಾಪಕರಾದ ಮಾರ್ಕೆಟ್ ಸತೀಶ್ ಅವರು ‘ಅಂಜು‘ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವುದರ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಅಲ್ಲದೆ ‘ಲೆಕ್ಕಾಚಾರ‘ ಚಲನಚಿತ್ರದ ನಿರ್ಮಾಪಕ ಆರ್. ಚಂದ್ರು, ಕ್ಯಾಮೆರಾ ಸ್ವಿಚ್‍ಆನ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಕೋರಿದರು.

ಬೆಂಗಳೂರಿನಿಂದ ಹೈದರಾಬಾದ್‍ಗೆ ಸಿನಿಮಾ ಆಡಿಷನ್‍ಗಾಗಿ ಪ್ರಯಾಣ ಬೆಳೆಸುವ ಮೂರು ಜನ ನಾಯಕ ನಟರು ಹಾಗೂ ಮೂವರು ನಾಯಕಿಯರು, ಈ ನಡುವೆ ಐದು ಮಂದಿ ಸೈಕೋಗಳ ಪ್ರವೇಶವಾಗಿ ಅವರಿಂದ ನಾಯಕ ಹಾಗೂ ನಾಯಕಿಗೆ ಆಗುವ ತೊಂದರೆಗಳೇನು? ಅವುಗಳಿಂದ ಪಾರಾಗಲು ಅವರು ಮುಂದೆ ಪಡುವ ಕಷ್ಟಗಳೇನು? ಎಂಬ ಕುತೂಹಲಕರ ಕಥಾಂಶವುಳ್ಳ ಈ ಚಿತ್ರದಲ್ಲಿ ಹಿರಿಯ ನಟ ಅಭಿಜಿತ್ ಹಾಗು ಜೂನಿಯರ್ ರವಿಚಂದ್ರನ್ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಇನ್ನುಳಿದಂತೆ ನಾಯಕಿಯರಾಗಿ ಬಿಗ್‍ಬಾಸ್ ಖ್ಯಾತಿಯ ಸೋನು ಪಾಟೀಲ್, ರಮ್ಯ, ಯಶಸ್ಸಿನಿ, ನಾಯಕ ನಟರಾಗಿ ಊಲಿಬೆಲೆ ರಾಜೇಶ್‍ರೆಡ್ಡಿ, ರಾಜ್‍ಪ್ರತೀಕ್, ಸಿದ್ಧಾರ್ಥ ನಟಿಸುತ್ತಿದ್ದಾರೆ. ಖಳನಾಯಕನಾಗಿ ಬಾಂಬೆಯ ರಾಜೇಶ್ ಮುಂಡ್ಕೂರ್, ಆನಂದ್ ನಟಿಸುತ್ತಿದ್ದು ಉಳಿದ ತಾರಾಗಣದಲ್ಲಿ ನರಸಾಪುರ ಭಕ್ತರಹಳ್ಳಿ ರವಿ, ರೇಣುಕಾ, ಜೀವನ್, ಶಿವು, ಅಬ್ದುಲ್ ರೆಹಮಾನ್ ಮೊದಲಾದವರು ನಟಿಸುತ್ತಿದ್ದಾರೆ.

ಅಂಜು ಚಲನಚಿತ್ರಕ್ಕೆ ರಾಜೀವ್ ಕೃಷ್ಣ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದು. ವಿನು ಮನಸು ಅವರ ಸಂಗೀತ, ರಮೇಶ್ ಕೊಯಿರಾ ಅವರ ಛಾಯಾಗ್ರಹಣ, ಮಲ್ಲಿ ಅವರ ಸಂಕಲನ, ಸುರೇಶ್ ಕಂಬಳಿ ಅವರ ಸಾಹಿತ್ಯ, ಶಿವು ಅವರ ಸಾಹಸ, ನಾಗಸುಮಂತ್ ಅವರ ಸ್ಥಿರಚಿತ್ರಣ. ಭಕ್ತರಹಳ್ಳಿ ರವಿ ಅವರ ನಿರ್ಮಾಣ ನಿರ್ವಹಣೆಯಿದೆ. ಈಗಾಗಲೇ ಚಿಕ್ಕಬಳ್ಳಾಪುರ, ಚಿಂತಾಮಣಿ, ನಂದಿ ಗಿರಿಧಾಮ ಮೊದಲಾದ ಸುಂದರ ತಾಣಗಳಲ್ಲಿ ಮೊದಲ ಹಂತದ ಚಿತ್ರೀಕರಣ ಮಗಿಸಿರುವ ಚಿತ್ರತಂಡ ಎರಡನೇ ಹಂತದ ಚಿತ್ರೀಕರಣಕ್ಕಾಗಿ ಸವದತ್ತಿ, ಗಜೇಂದ್ರಗಡಕ್ಕೆ ಪ್ರಯಾಣ ಬೆಳಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net