ತೆಲುಗಿನಲ್ಲೂ ಬಿಡುಗಡೆ ಆಗಲಿದೆ ಶೋಕಿವಾಲಾ

Shokiwala
Published on

ಬೆಂಗಳೂರು: ನಟ ಅಜೇಯ್ ರಾವ್ ಡಬಲ್ ಖುಷಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆ ಆಗಿರುವ ‘ಕೃಷ್ಣ ಟಾಕೀಸ್’ ಸಿನಿಮಾ ಒಳ್ಳೆಯ ಪ್ರತಿಕ್ರಿಯೆ ಗಿಟ್ಟಿಸಿಕೊಳ್ಳುತ್ತಿದ್ದರೆ, ಇದೀಗ ಅವರ ಮುಂದಿನ ಸಿನಿಮಾ ಕನ್ನಡದ ಜತೆಗೆ ತೆಲುಗಿನಲ್ಲಿಯೂ ತೆರೆಕಾಣುವುದಕ್ಕೆ ಸಿದ್ಧವಾಗಿದ್ದು, ಅಧಿಕೃತ ಘೋಷಣೆಯೂ ಆಗಿದೆ. ಅದೇ ‘ಶೋಕಿವಾಲಾ’ ಸಿನಿಮಾ. ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್​ನಲ್ಲಿ ಟಿ.ಆರ್. ಚಂದ್ರಶೇಖರ್ ನಿರ್ಮಾಣ ಮಾಡಿರುವ ‘ಶೋಕಿವಾಲಾ’ ಚಿತ್ರವನ್ನು ಜಾಕಿ ನಿರ್ದೇಶನ ಮಾಡಿದ್ದು, ಇದು ಅವರ ಮೊದಲ ಚಿತ್ರವಾಗಿದೆ. ಮೊದಲ ಪ್ರಯತ್ನದಲ್ಲಿಯೇ ದ್ವಿಭಾಷೆಯಲ್ಲಿ ಅವರ ಚಿತ್ರ ತೆರೆಗೆ ಬರಲಿದೆ.

ಇನ್ನು ಈ ಚಿತ್ರದ ನಾಯಕಿ ಸಂಜನಾ ಆನಂದ್ ಸಹ ಸಂಭ್ರಮದಲ್ಲಿದ್ದಾರೆ. ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ಬಿಜಿಯಾಗಿರುವ ಅವರಿಗೆ, ಪರಭಾಷೆಯಿಂದಲೂ ಅವಕಾಶಗಳು ಬಂದಿದ್ದವು. ಆದರೆ, ಕೈಯಲಿರುವ ಸಿನಿಮಾ ಮುಗಿಸಿ ಅತ್ತ ಕಡೆ ಹೊರಳುವ ಆಸೆ ಇತ್ತು. ಇದೀಗ ಕಾಕತಾಳೀಯವೆಂಬಂತೆ ‘ಶೋಕಿವಾಲಾ’ ಚಿತ್ರದ ಮೂಲಕ ಟಾಲಿವುಡ್​ಗೆ ಪದಾರ್ಪಣೆ ಮಾಡಿದ್ದಾರೆ. ಈ ಹಿಂದೆ ಅಜೇಯ್ ನಟನೆಯ ‘ಕೃಷ್ಣನ್ ಮ್ಯಾರೇಜ್ ಸ್ಟೋರಿ’ ಚಿತ್ರ ತೆಲುಗಿನಲ್ಲಿಯೂ ರಿಲೀಸ್ ಆಗಿತ್ತು.

ಕೃಷ್ಣ ಟಾಕೀಸ್ ಪ್ರದರ್ಶನ ಸ್ಥಗಿತ: ಕರೊನಾ ಪ್ರಕರಣ ಹೆಚ್ಚಳ ಹಿನ್ನೆಲೆಯಲ್ಲಿ ‘ಕೃಷ್ಣ ಟಾಕೀಸ್’ ಚಿತ್ರತಂಡವೀಗ ಚಿತ್ರ ಪ್ರದರ್ಶನಕ್ಕೆ ಬ್ರೇಕ್ ಹಾಕಲು ನಿರ್ಧರಿಸಿದ್ದು, ಎಲ್ಲವೂ ಸರಿಹೋದ ಬಳಿಕ ಚಿತ್ರ ಮರು ಬಿಡುಗಡೆ ಆಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net