ರಾಕ್​ಲೈನ್​ಗೆ ನೀರು ಕುಡಿಸಿದ ಭಟ್ಟರು; ಶಿವರಾಜಕುಮಾರ್-ಪ್ರಭುದೇವ ಚಿತ್ರ ಪ್ರಾರಂಭ

Bhat
Published on

ಬೆಂಗಳೂರು: ಯಾವಾಗೆಲ್ಲ ನೀರು ಕುಡಿಯುತ್ತೇವೋ, ಆಗೆಲ್ಲಾ ಈ ಚಿತ್ರ ನೆನಪಿಗೆ ಬರಬೇಕು. ಅಂತಹ ಕಥೆ ಇದು ...’ ಎಂದಿದ್ದರಂತೆ ಯೋಗರಾಜ್ ಭಟ್. ಆ ನಂತರ ಇನ್ನೊಂದು ಕಥೆಯನ್ನೂ ಅವರು ಹೇಳಿದ್ದರಂತೆ. ಆದರೆ, ರಾಕ್​ಲೈನ್ ವೆಂಕಟೇಶ್ ಮಾತ್ರ ಮೊದಲು ಹೇಳಿದ ನೀರಿನ ಕಥೆಯನ್ನೇ ಚಿತ್ರ ಮಾಡಿ ಎಂದು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆ ಚಿತ್ರ ಈಗ ಕೊನೆಗೂ ಶುರುವಾಗಿದೆ. ಈ ಹೆಸರಿಡದ ಚಿತ್ರವು ರಾಕ್​ಲೈನ್ ನಿರ್ವಣದ 47ನೇ ಚಿತ್ರ ಎಂದರೆ ಆಶ್ಚರ್ಯವಾಗಬಹುದು. ಕೋವಿಡ್ ನಂತರ ಚಿತ್ರ ನಿರ್ವಣದಿಂದ ದೂರವೇ ಇದ್ದ ಅವರು, ಈ ಚಿತ್ರದ ಮೂಲಕ ನಿರ್ವಣಕ್ಕೆ ವಾಪಸ್ಸಾಗುತ್ತಿದ್ದಾರೆ. ಶಿವರಾಜಕುಮಾರ್ ಮತ್ತು ಪ್ರಭುದೇವ ನಾಯಕರಾಗಿ ನಟಿಸುತ್ತಿದ್ದಾರೆ.

ಚಿತ್ರದ ಮುಹೂರ್ತ ಶುಕ್ರವಾರ ಬೆಳಿಗ್ಗೆ ರಾಕ್​ಲೈನ್ ಸ್ಟುಡಿಯೋದಲ್ಲಿ ಪ್ರಾರಂಭವಾಗಿದ್ದು, ಮೊದಲ ದೃಶ್ಯಕ್ಕೆ ಗೀತಾ ಶಿವರಾಜಕುಮಾರ್ ಕ್ಲಾಪ್ ಮಾಡಿದ್ದಾರೆ. ಭಟ್ಟರು, ಶಿವರಾಜಕುಮಾರ್​ರ ಅಪ್ಪಟ ಅಭಿಮಾನಿಯಂತೆ. ಅವರಿಗೆ ಎರಡು ವರ್ಷಗಳಿಂದ ಕಥೆ ಹೇಳುತ್ತಲೇ ಬಂದಿದ್ದಾರಂತೆ. ಈಗ ಕಥೆ ಸಿದ್ಧವಾಗಿದೆ. ‘ಮಜ, ಎಮೋಷನ್ ಜತೆಗೆ ಇದೊಂದು ಅದ್ಭುತ ಆಕ್ಷನ್ ಡ್ರಾಮ ಎನ್ನಬಹುದು. ನಾನು ಈ ಚಿತ್ರದಲ್ಲಿ ತಂತ್ರಜ್ಞ ಎನ್ನುವುದಕ್ಕಿಂತ ಪ್ರೇಕ್ಷಕನಾಗಿ ಕೆಲಸ ಮಾಡುತ್ತಿದ್ದೇನೆ. ಇಬ್ಬರೂ ಉತ್ತಮ ನಟರು. ಇಂತಹ ದಿಗ್ಗಜರ ಜತೆಗೆ ಕೆಲಸ ಮಾಡಿ ನಾನು ಏನಾದರೂ ಕಲಿಯುತ್ತೀನಿ’ ಎನ್ನುತ್ತಾರೆ ಭಟ್.

ರಾಕ್​ಲೈನ್ ಚಿತ್ರ ಎಂದರೆ ತಮ್ಮ ಮನೆಯ ಚಿತ್ರ ಇದ್ದ ಹಾಗೆ ಎಂದ ಶಿವರಾಜಕುಮಾರ್, ‘ನನ್ನ ಅವರ ಸ್ನೇಹ 30 ವರ್ಷಗಳದ್ದು. ಸ್ನೇಹಿತರಾಗಿ ಬಂದು ನಿರ್ವಪಕರಾದರು. ಭಟ್ ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ಎಲ್ಲ ರೀತಿಯ ಅಂಶಗಳಿರುವ ಈ ಚಿತ್ರ ಎಲ್ಲರ ಮನಸ್ಸಿಗೆ ಹತ್ತಿರವಾಗುತ್ತದೆ’ ಎಂಬ ನಂಬಿಕೆ ಇದೆ’ ಎಂದರು. ಇವತ್ತಿನ ತಲೆಮಾರಿನವರಿಗೆ ಇಷ್ಟವಾಗುವಂತಹ ಕಥೆಯನ್ನು ಭಟ್ಟರು ಮಾಡಿಕೊಂಡಿದ್ದಾರೆ ಎನ್ನುವ ರಾಕ್​ಲೈನ್, ‘ಹೊಟ್ಟೆ ತುಂಬಾ ನಗಿಸುವುದರ ಜತೆಗೆ, ಒಳ್ಳೆಯ ಸಂದೇಶ ಇದೆ’ ಎಂದರು. ಈ ಚಿತ್ರಕ್ಕೆ ಹರಿಕೃಷ್ಣ ಸಂಗೀತ ಮತ್ತು ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net