

ಚೆನ್ನೈ: ರಜನಿಕಾಂತ್ ಅಭಿನಯದ 'ಜೈಲರ್' ಚಿತ್ರವು ಪ್ರಾರಂಭವಾಗಿ ಕೆಲವು ತಿಂಗಳುಗಳೇ ಆಗಿವೆ. ಈಗಾಗಲೇ ಶೇ. 40ರಷ್ಟು ಭಾಗದ ಚಿತ್ರೀಕರಣವೂ ಮುಗಿದಿದೆಯಂತೆ. ಆದರೆ, ಶಿವರಾಜಕುಮಾರ್ ಯಾವಾಗಿನಿಂದ ಚಿತ್ರೀಕರಣದಲ್ಲಿ ಭಾಗವಹಿಸುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಆ ಕುತೂಹಲ ಕೊನೆಗೂ ತಣಿದಿದ್ದು, ಚಿತ್ರೀಕರಣದಲ್ಲಿ ಶಿವರಾಜಕುಮಾರ್ ಭಾಗವಹಿಸಿರುವುದಷ್ಟೇ ಅಲ್ಲ, ಅವರ ಒಂದು ಫೋಟೋ ಸಹ ಬಿಡುಗಡೆಯಾಗಿದೆ.
'ಜೈಲರ್' ಚಿತ್ರದಲ್ಲಿ ಶಿವಣ್ಣ ನಟಿಸುತ್ತಾರೆ ಎಂಬುದು ಹಳೆಯ ಸುದ್ದಿ. ಈ ವಿಷಯವನ್ನು ಅವರು ಒಪ್ಪಿಕೊಂಡೇ ಆರು ತಿಂಗಳುಗಳಾಗಿವೆ. ಹಿಂದೊಮ್ಮೆ ಮಾಧ್ಯಮದವರೊಂದಿಗೆ ಮಾತಿಗೆ ಸಿಕ್ಕಾಗ, ಆಗಸ್ಟ್ನಲ್ಲಿ ಚಿತ್ರೀಕರಣ ಎಂದು ಹೇಳಿದ್ದರು. ಕಾರಣಾಂತರಗಳಿಂದ ಅದು ಮುಂದಕ್ಕೆ ಹೋಗಿ, ಇದೀಗ ಚೆನ್ನೈನಲ್ಲಿ ಚಿತ್ರೀಕರಣ ಶುರುವಾಗಿದೆಯಂತೆ. ಗುರುವಾರ ಸೋಷಿಯಲ್ ಮೀಡಿಯಾದಲ್ಲಿ ಮೂಲಕ ಅವರನ್ನು ಚಿತ್ರತಂಡಕ್ಕೆ ಬರಮಾಡಿಕೊಂಡಿರುವ ಸನ್ ಪಿಕ್ಚರ್ಸ್ ಸಂಸ್ಥೆಯು, ಅವರ ಒಂದು ಫೋಟೋವನ್ನು ಸಹ ಬಿಡುಗಡೆ ಮಾಡಿದೆ.
'ಜೈಲರ್' ಚಿತ್ರವು ರಜನಿಕಾಂತ್ ಅಭಿನಯದ 169ನೇ ಚಿತ್ರವಾಗಿದ್ದು, ಇದಕ್ಕೂ ಮುನ್ನ ಚಿತ್ರಕ್ಕೆ 'ತಲೈವಾ 169' ಎಂದು ಕರೆಯಲಾಗುತ್ತಿತ್ತು. ಕೆಲವು ದಿನಗಳ ಹಿಂದೆ ಚಿತ್ರಕ್ಕೆ "ಜೈಲರ್' ಎಂಬ ಹೆಸರಿಡಲಾಗಿದೆ ಎಂದು ಅಧಿಕೃತವಾಗಿ ಘೋಷಿಸಲಾಯ್ತು.
ಈ ಚಿತ್ರದಲ್ಲಿ ರಜನಿಕಾಂತ್ಗೆ ನಾಯಕಿಯಾಗಿ ಐಶ್ವಯಾ ರೈ ನಟಿಸುತ್ತಾರೆ ಎಂದು ಮೊದಲು ಹೇಳಲಾಯ್ತು. ಆ ನಂತರ ತಮನ್ನಾ ಭಾಟಿಯಾ ನಟಿಸಬಹುದು ಎಂಬ ಇನ್ನೊಂದು ಸುದ್ದಿ ಕೇಳಿ ಬಂತು. ಸದ್ಯಕ್ಕಂತೂ ಚಿತ್ರತಂಡದವರು ನಾಯಕಿ ಯಾರು ಎಂದು ಅಧಿಕೃತವಾಗಿ ಘೋಷಿಸಿಲ್ಲ.
'ಜೈಲರ್'ನಲ್ಲಿ ರಜನಿಕಾಂತ್ ಜತೆಗೆ ರಮ್ಯಾ ಕೃಷ್ಣ, ಪ್ರಿಯಾಂಕಾ ಅರುಳ್ ಮೋಹನ್ ಮುಂತಾದವರು ನಟಿಸುತ್ತಿದ್ದು, ಶಿವರಾಜಕುಮಾರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ಸನ್ ಪಿಕ್ಚರ್ಸ್ ಸಂಸ್ಥೆಯು ನಿರ್ಮಿಸುತ್ತಿದ್ದು, ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ.