

ಉಪೇಂದ್ರ ನಿರ್ದೇಶನದಲ್ಲಿ ಶಿವರಾಜಕುಮಾರ್ ಅಭಿನಯದ ‘ಓಂ’ ಚಿತ್ರವು ನಾಳೆಗೆ 25 ವರ್ಷ ಕಂಪ್ಲೀಟ್ ಮಾಡಲಿದೆ. 1995ರ ಮೇ 19ರಂದು ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಆ ನಂತರ ಹಲವು ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈಗ ಚಿತ್ರ ಬಿಡುಗಡೆಯಾಗಿ ನಾಳೆಗೆ 25 ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಶಿವರಾಜಕುಮಾರ್ ಮತ್ತು ಉಪೇಂದ್ರ ಅಭಿಮಾನಿಗಳಿಗೆ ಸಖತ್ ಗಿಫ್ಟ್ ಕೊಡುವುದಕ್ಕೆ ಯೋಚಿಸುತ್ತಿದ್ದಾರೆ.
ಬಹುಶಃ ಲಾಕ್‌ಡೌನ್ ಇಲ್ಲದಿದ್ದರೆ, ‘ಓಂ’ ಬಿಡುಗಡೆಯಾದ 25 ವರ್ಷಗಳ ಸಂಭ್ರಮದಲ್ಲಿ ಏನಾದರೂ ಸಮಾರಂಭ ಇರುತಿತ್ತು. ಆದರೆ, ಲಾಕ್‌ಡೌನ್ ಇನ್ನೂ ಪೂರ್ತಿ ತೆರವಾಗಿಲ್ಲದ ಕಾರಣ, ಯಾವುದೇ ಸಂಭ್ರಮಾಚರಣೆ ಇರುವುದಿಲ್ಲ. ಹಾಗಂತ ಶಿವರಾಜಕುಮಾರ್ ಮತ್ತು ಉಪೇಂದ್ರ ಸುಮ್ಮನೆ ಇಲ್ಲ, ಚಿತ್ರವನ್ನು ಗೆಲ್ಲಿಸಿದ ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳುವುದಕ್ಕೆ ಫೇಸ್‌ಬುಕ್ ಲೈವ್ ಬರುತ್ತಿದ್ದಾರೆ.
ಹೌದು, ಈ ಕುರಿತು ಸ್ವತಃ ಶಿವರಾಜಕುಮಾರ್ ಮತ್ತು ಉಪೇಂದ್ರ ಟ್ವೀಟ್ ಮಾಡಿಕೊಂಡಿದ್ದಾರೆ. ‘ಓಂ’ ಚಿತ್ರದ 25ನೇ ವರ್ಷದ ಸಂಭ್ರಮವನ್ನು ಆಚರಿಸುವುದಕ್ಕೆ ಫೇಸ್‌ಬುಕ್ ಲೈವ್ ಬರುವುದಕ್ಕೆ ಇಬ್ಬರೂ ತೀರ್ಮಾನಿಸಿದ್ದಾರೆ. ಅದರಂತೆ, ನಾಳೆ ರಾತ್ರಿ (ಮೇ 19) 7.30ಕ್ಕೆ ಇಬ್ಬರೂ ಫೇಸ್‌ಬುಕ್‌ನಲ್ಲಿ ಲೈವ್ ಬಂದು, ಚಿತ್ರದ ಕುರಿತಾಗಿ ಮಾತನಾಡಲಿದ್ದಾರೆ. ಆ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ನಡೆದ ಸ್ವಾರಸ್ಯಕರ ಘಟನೆಗಳು, ಮರೆಯದ ಅನುಭವಗಳನ್ನು ಅವರು ಅಭಿಮಾನಿಗಳ ಜತೆಗೆ ಹಂಚಿಕೊಳ್ಳಲಿದ್ದಾರೆ ಎನ್ನುವುದು ವಿಶೇಷ.
‘ಓಂ’ ಕನ್ನಡ ಚಿತ್ರರಂಗದಲ್ಲಿ ಟ್ರೆಂಡ್‌ಸೆಟರ್ ಆದ ಚಿತ್ರ. ರೌಡಿಸಂ ಚಿತ್ರಗಳಿಗೆ ಮುನ್ನುಡಿ ಬರೆದ 80. 80ರ ದಶಕದಲ್ಲಿನ ಬೆಂಗಳೂರಿನ ರಕ್ತಸಿಕ್ತ ಇತಿಹಾಸದ ಕುರಿತಾದ ಈ ಚಿತ್ರದಲ್ಲಿ ಶಿವರಾಜಕುಮಾರ್, ಪ್ರೇಮಾ, ಹರೀಶ್ ರೈ, ‘ಉಪಾಸನೆ’ ಸೀತಾರಾಂ, ಜಿ.ವಿ. ಶಿವಾನಂದ್ ಮುಂತಾದವರು ನಟಿಸಿದ್ದರು.