

ಲಾಕ್ಡೌನ್ ಅವಧಿಯಲ್ಲಿ ಸಿನಿಮಾ ನಟರು ಜಿಮ್ಗಳಲ್ಲಿ ಬೆವರಿಳಿಸುತ್ತಿದ್ದಾರೆ. ಸ್ಯಾಂಡಲ್ವುಡ್ನಲ್ಲಿಯೂ ಕಿಚ್ಚ ಸುದೀಪ್, ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ವರ್ಕೌಟ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಅಭಿಮಾನಿಗಳ ಕುತೂಹಲಕ್ಕೆ ಒಗ್ಗರಣೆ ಹಾಕುತ್ತಿದ್ದಾರೆ. ಬಾಲಿವುಡ್ ಘಟಾನುಘಟಿಗಳಾದ ಸಲ್ಮಾನ್ ಖಾನ್, ಹೃತಿಕ್ ರೋಷನ್ ಸೇರಿ ಹಲವರು ಬಾಡಿ ಟ್ಯೂನ್ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಅದಕ್ಕೆ ಸಾಕ್ಷಿ ಎಂಬಂತೆ ರಣವೀರ್ ಸಿಂಗ್ ದೇಹವನ್ನು ಹುರಿಯಾಗಿಸಿಕೊಂಡಿದ್ದಾರೆ. ಫೋಟೋವೊಂದನ್ನು ಹಂಚಿಕೊಂಡು ಅಚ್ಚರಿ ಮೂಡಿಸಿದ್ದಾರೆ.
ಸಿನಿಮಾ ಸಲುವಾಗಿ ಆಗಾಗ ದೈಹಿಕವಾಗಿ ಒಂದಷ್ಟು ಬದಲಾವಣೆ ಮಾಡಿಕೊಳ್ಳುವ ರಣವೀರ್, ಇದೀಗ ಯಾವ ಚಿತ್ರಕ್ಕೆ ಈ ರೀತಿಯ ಕಟ್ಟುಮಸ್ತಾದ ಬಾಡಿ ಮಾಡಿದ್ದಾರೆ ಎಂಬುದು ಸದ್ಯದ ಕುತೂಹಲ. ಸಿನಿಮಾಗಳ ವಿಚಾರಕ್ಕೆ ಬರುವುದಾದರೆ, ಎಲ್ಲ ಅಂದುಕೊಂಡಂತೆ ಆಗಿದ್ದರೆ, ಏಪ್ರಿಲ್ ತಿಂಗಳಲ್ಲೇ ಬಹುನಿರೀಕ್ಷಿತ 83 ಸಿನಿಮಾ ತೆರೆಕಂಡಿರಬೇಕಿತ್ತು. ಆದರೆ, ಕರೊನಾ ಹಿನ್ನೆಲೆಯಲ್ಲಿ ಸಿನಿಮಾ ಬಿಡುಗಡೆ ದಿನಾಂಕ ಮುಂದೆ ಹೋಯಿತು. ಅದೇ ರೀತಿ ‘ಜಯೇಶ್ ಭಾಯ್ ಜೋರ್ದಾರ್’ ಚಿತ್ರದ ಕೆಲಸಗಳು ಮುಕ್ತಾಯವಾಗಿದ್ದು, ಅದರ ಬಿಡುಗಡೆ ಯಾವಾಗ ಎಂಬುದನ್ನು ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಘೋಷಿಸಿಕೊಳ್ಳಲಿದೆ ಚಿತ್ರತಂಡ. (ಏಜೆನ್ಸೀಸ್)