ಶಿವಾಜಿ ಸುರತ್ಕಲ್​ಕಣ್ತುಂಬಿಕೊಂಡ ದ್ರಾವಿಡ್

dravid feb 18 2020
Published on

ಬೆಂಗಳೂರು: ನಟ ರಮೇಶ್ ಅರವಿಂದ್ ಅಭಿನಯದ 101ನೇ ಸಿನಿಮಾ ‘ಶಿವಾಜಿ ಸುರತ್ಕಲ್’ನ ಮೊದಲ ಪ್ರೇಕ್ಷಕರಾಗಿ ಖ್ಯಾತ ಕ್ರಿಕೆಟಿಗ ರಾಹುಲ್ ದ್ರಾವಿಡ್ ವೀಕ್ಷಣೆ ಮಾಡಿದ್ದಾರೆ. ಅವರಿಗೆಂದೇ ಈ ವಿಶೇಷ ಪ್ರದರ್ಶನವನ್ನು ಮಂಗಳವಾರ ಏರ್ಪಾಡು ಮಾಡಲಾಗಿತ್ತು. ಸಿನಿಮಾ ನೋಡಿ ಸಂತೋಷಪಟ್ಟ ಅವರು, ಚಿತ್ರದ ನಾಯಕ ರಮೇಶ್ ಅರವಿಂದ್ ಅಭಿನಯ, ಚಿತ್ರವನ್ನು ಅಚ್ಚುಕಟ್ಟಾಗಿ ಮೂಡಿಬರುವಂತೆ ಮಾಡಿದ ನಿರ್ದೇಶಕ ಆಕಾಶ್ ಶ್ರೀವತ್ಸ ಶ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇದು ಪತ್ತೇದಾರಿ ಕ್ರೖೆಮ್ ಕಥೆ ಇರುವ ಸಿನಿಮಾ. ರಣಗಿರಿ ಎಂಬಲ್ಲಿ ನಡೆಯುವ ಕೊಲೆ ಪ್ರಕರಣ ಭೇದಿಸುವ ಪೊಲೀಸ್ ಅಧಿಕಾರಿ ಶಿವಾಜಿ ಸುರತ್ಕಲ್ ಪಾತ್ರದಲ್ಲಿ ರಮೇಶ್ ಅರವಿಂದ್ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಅವರು 2 ವಿಭಿನ್ನ ಲುಕ್​ನಲ್ಲಿ ಕಾಣಿಸಿಕೊಂಡಿದ್ದು, ಚಿತ್ರದ ಕಥೆ ಎರಡು ಕಾಲಘಟ್ಟದಲ್ಲಿ ಸಾಗಲಿದೆ.

ಕೆ.ಎನ್. ರೇಖಾ, ಅನೂಪ್ ಗೌಡ ನಿರ್ವಣದ ಈ ಸಿನಿಮಾದಲ್ಲಿ ನಾಯಕಿಯರಾಗಿ ರಾಧಿಕಾ ನಾರಾಯಣ್ ಹಾಗೂ ಆರೋಹಿ ನಾರಾಯಣ್ ಅಭಿನಯಿಸಿದ್ದಾರೆ. ಚಿತ್ರ ಇದೇ ಶುಕ್ರವಾರ (ಫೆ. 21) ಬಿಡುಗಡೆ ಆಗಲಿದೆ.

ಈ ಸಿನಿಮಾ ಅದ್ಭುತವಾಗಿದೆ. ಚಿತ್ರದ ಕ್ಲೈಮ್ಯಾಕ್ಸ್ ನನ್ನನ್ನು ಬೆರಗುಗೊಳಿಸಿತು. ಪ್ರೇಕ್ಷಕರನ್ನೂ ಅದು ಆಶ್ಚರ್ಯಪಡಿಸುವುದು ಖಚಿತ. ಈ ಸಿನಿಮಾ ಯಶಸ್ಸು ಗಳಿಸಲಿ. | ರಾಹುಲ್ ದ್ರಾವಿಡ್ ಖ್ಯಾತ ಕ್ರಿಕೆಟಿಗ ಕೆಲವರನ್ನು ಪ್ರತಿಸಲ ಭೇಟಿಯಾದಾಗಲೂ ಅವರೆಡೆಗಿನ ಗೌರವ ಇಮ್ಮಡಿ ಆಗುತ್ತದೆ. ಅಂಥವರಲ್ಲಿ ರಾಹುಲ್ ದ್ರಾವಿಡ್ ಕೂಡ ಒಬ್ಬರು. ಅವರು ಶಿವಾಜಿ ಸುರತ್ಕಲ್ ಚಿತ್ರ ನೋಡಿ ಸದಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು. | ರಮೇಶ್ ಅರವಿಂದ್ ನಟ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net