

ಬೆಂಗಳೂರು: ರಮೇಶ್ ಅರವಿಂದ್ ಅಭಿನಯದ ‘ಶಿವಾಜಿ ಸುರತ್ಕಲ್ - ದಿ ಕೇಸ್ ಆಫ್ ರಣಗಿರಿ ರಹಸ್ಯ’ ಯಶಸ್ವಿಯಾಗುತ್ತಿದ್ದಂತೆಯೇ, ಅದರ ಮುಂದುವರೆದ ಭಾಗಕ್ಕೆ ತಯಾರಿ ಮಾಡಿಕೊಳ್ಳುತ್ತಿರುವುದಾಗಿ ನಿರ್ದೇಶಕ ಆಕಾಶ್ ಶ್ರೀವತ್ಸ ಹೇಳಿಕೊಂಡಿದ್ದರು. ಈಗ ಕಥೆ-ಚಿತ್ರಕಥೆ ಲಾಕ್ ಆಗಿದ್ದು, ಅಕ್ಟೋಬರ್ನಿಂದ ಚಿತ್ರೀಕರಣ ಶುರುವಾಗಲಿದೆ. ಇಂದು ರಮೇಶ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದ್ದು, ಅದರ ಪ್ರಯುಕ್ತ ಚಿತ್ರವನ್ನು ಅಧಿಕೃತವಾಗಿ ಘೋಷಿಸಲಾಗುತ್ತಿದೆ. ಸೋಷಿಯಲ್ ಮೀಡಿಯಾ ಮೂಲಕ ಚಿತ್ರದ ಮೊದಲ ನೋಟವನ್ನು ಬಿಡುಗಡೆ ಮಾಡಲಾಗುತ್ತಿದೆ.
ಈ ಚಿತ್ರವು ‘ಶಿವಾಜಿ ಸುರತ್ಕಲ್’ನ ಮುಂದುವರೆದ ಭಾಗವಾಗಲಿದೆ ಎನ್ನುತ್ತಾರೆ ಆಕಾಶ್. ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ಅವರು, ‘ಅದು ಎರಡು ಕಾಲಘಟ್ಟದಲ್ಲಿ ನಡೆಯುವ ಕಥೆಯಾಗಿತ್ತು. ಇಲ್ಲಿ ಮೂರು ಬೇರೆ ಕಾಲಘಟ್ಟಗಳಿವೆ. ಶಿವಾಜಿಗೆ ಇನ್ನೊಂದು ರೋಚಕ ಕೇಸ್ ಎದುರಾಗಲಿದ್ದು, ಅದನ್ನು ಹೇಗೆ ಬಗೆಹರಿಸುತ್ತಾರೆ ಎಂಬುದೇ ಹೈಲೈಟ್. ಜತೆಗೆ, ಶಿವಾಜಿ ಸುರತ್ಕಲ್ ಎಂಬ ಹೆಸರಿನ ಬಗ್ಗೆ ಸಾಕಷ್ಟು ಪ್ರಶ್ನೆಗಳು ಕೇಳಿಬಂದಿದ್ದವು. ಅವಕ್ಕೆಲ್ಲ ಈ ಚಿತ್ರದಲ್ಲಿ ಉತ್ತರ ಸಿಗಲಿದೆ. ಜತೆಗೆ ’ ಎನ್ನುತ್ತಾರೆ ಆಕಾಶ್. ಮೊದಲ ಚಿತ್ರ ಮಾಡಿದ ತಂಡವೇ ಈ ಚಿತ್ರವನ್ನೂ ಮುಂದುವರೆಸುತ್ತಿದೆ. ರೇಖಾ ಕೆ.ಎನ್ ಹಾಗೂ ಅನೂಪ್ ನಿರ್ವಿುಸಿದರೆ, ಆಕಾಶ್ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಗುರುಪ್ರಸಾದ್ ಇಲ್ಲೂ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದು, ರಮೇಶ್ ಅಲ್ಲದೆ ಆ ಚಿತ್ರದಲ್ಲಿ ನಟಿಸಿದ್ದ ರಾಧಿಕಾ ನಾರಾಯಣ್, ರಘು ರಾಮನಕೊಪ್ಪ ಮತ್ತು ವಿದ್ಯಾಮೂರ್ತಿ ಇಲ್ಲೂ ಮುಂದುವರೆಯಲಿದ್ದಾರೆ.
‘ಶಿವಾಜಿ ಸುರತ್ಕಲ್’ ಅಕ್ಟೋಬರ್ನಿಂದ ಪ್ರಾರಂಭವಾಗಲಿದ್ದು, ಡಿಸೆಂಬರ್ಹೊತ್ತಿಗೆ ಮುಗಿಯಲಿದೆ. ಇದಲ್ಲದೆ, ‘100’ ಚಿತ್ರ ಸಹ ಸೆನ್ಸಾರ್ ಆಗಿ ಬಿಡುಗಡೆಗೆ ಸಿದ್ಧವಿದೆ. ಲಾಕ್ಡೌನ್ ಸಂದರ್ಭದಲ್ಲಿ ಒಂದು ಸ್ಕ್ರಿಪ್ಟ್ ಮಾಡಿಟ್ಟುಕೊಂಡಿದ್ದೆ, ಅದರ ಮಾತುಕತೆ ನಡೆಯುತ್ತಿದ್ದು, ಎಲ್ಲ ಅಂದುಕೊಂಡಂತೆ ಆದರೆ, ಡಿಸೆಂಬರ್ನಲ್ಲಿ ಪ್ರಾರಂಭವಾಗುವ ಸಾಧ್ಯತೆ ಇದೆ.
| ರಮೇಶ್ ಅರವಿಂದ್