ಇನ್ನೊಂದು ಕ್ರಿಕೆಟ್​ ತಂಡ ಖರೀದಿಸಿದ ಶಾರೂಖ್​ ...

Shahrukh Khan - Final
Published on

ಮುಂಬೈ: ಬಾಲಿವುಡ್​ನ 'ಕಿಂಗ್​ ಖಾನ್​' ಎಂದೇ ಜನಪ್ರಿಯರಾಗಿರುವ ಶಾರೂಖ್​ ಖಾನ್​ಗೆ ಕ್ರಿಕೆಟ್​ ಬಗ್ಗೆ ಅದೆಷ್ಟು ಪ್ರೀತಿ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಈಗಾಗಲೇ ಕಳೆದ ಹಲವು ವರ್ಷಗಳಿಂದ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಶಾರೂಖ್​ ಮಾಲೀಕತ್ವದ ಕೊಲ್ಕತ್ತಾ ನೈಟ್​ ರೈಡರ್ಸ್​ ತಂಡವು ಆಡುತ್ತಿದ್ದು, ಎರಡು ಬಾರಿ ಚಾಂಪಿಯನ್​ ಸಹ ಆಗಿದೆ. ಇದರಿಂದ ಸ್ಫೂರ್ತಿಗೊಂಡು ಶಾರೂಖ್​ ವೆಸ್ಟ್​ ಇಂಡೀಸ್​ನಲ್ಲಿ ನಡೆಯುವ ಕೆರಿಬಿಯನ್​ ಲೀಗ್​ನಲ್ಲಿ ಒಂದು ತಂಡದ ಮಾಲೀಕತ್ವವನ್ನು ವಹಿಸಿಕೊಂಡಿದ್ದಾರೆ.

ಈಗ್ಯಾಕೆ ಈ ಮಾತು ಎಂದರೆ, ಈಗಾಗಲೇ ಎರಡು ತಂಡಗಳ ಮಾಲೀಕರಾಗಿರುವ ಶಾರೂಖ್​ ಖಾನ್​, ಇದೀಗ ಮೂರನೇ ತಂಡವನ್ನು ಖರೀದಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಅಮೇರಿಕಾದಲ್ಲೂ ಕ್ರಿಕೆಟ್​ ಲೀಗ್​ ಪ್ರಾರಂಭವಾಗಿದ್ದು, ಈ ಟೂರ್ನಿಯಲ್ಲಿ ಲಾಸ್ ಏಂಜಲೀಸ್ ನೈಟ್​ ರೈಡರ್ಸ್​ ಎಂಬ ತಂಡಕ್ಕೆ ಕಿಂಗ್​ ಖಾನ್​ ಮಾಲೀಕರು ಎಂದು ಹೇಳಲಾಗುತ್ತಿದೆ.

ಈ ಟೂರ್ನಿಯಲ್ಲಿ ನ್ಯೂಯಾರ್ಕ್​, ಸ್ಯಾನ್​ಫ್ರಾನ್ಸಿಸ್ಕೋ, ವಾಷಿಂಗ್ಟನ್​ ಡಿಸಿ, ಡಲ್ಲಾಸ್​, ಚಿಕಾಗೋ ಮತ್ತು ಲಾಸ್​ ಏಂಜಲೀಸ್​ ತಂಡಗಳು ಭಾಗಿಯಾಗಿದ್ದು, ಈ ಪೈಕಿ ಲಾಸ್​ ಏಂಜಲೀಸ್​ ನೈಟ್​ ರೈಡರ್ಸ್​ ತಂಡದ ಜವಾಬ್ದಾರಿಯನ್ನು ಶಾರೂಖ್​ ವಹಿಸಿಕೊಂಡಿದ್ದಾರೆ. ಬರೀ ತಂಡದ ಮಾಲೀಕತ್ವವಷ್ಟೇ ಅಲ್ಲ, ಅಮೇರಿಕಾದಲ್ಲಿ ಹಿಂದುಳಿದಿರುವ ಕ್ರಿಕೆಟ್ ಪಂದ್ಯವನ್ನು ಮತ್ತಷ್ಟು ಬೆಳೆಸುವುದಕ್ಕೆ ಪಣ ತೊಟ್ಟಿರುವ ಶಾರೂಖ್​ ಖಾನ್, ಅಮೇರಿಕಾದಲ್ಲಿ ಕ್ರಿಕೆಟ್​ ಸ್ಟೇಡಿಯಂಗಳನ್ನು ಕಟ್ಟುವುದಕ್ಕೆ ಮುಂದಾಗುತ್ತಾರಂತೆ.

ಶಾರೂಖ್​ ಖಾನ್​ ಅವರು ಅಮೇರಿಕಾದಲ್ಲಿ ಕ್ರಿಕೆಟ್​ ಬೆಳೆಸುವ ನಿಟ್ಟಿನಲ್ಲಿ ಈಗಾಗಲೇ ಹೆಜ್ಜೆ ಇಟ್ಟಿದ್ದರೂ, ಅಲ್ಲಿ ಕ್ರಿಕೆಟ್​ ಟೂರ್ನಿ ಪ್ರಾರಂಭವಾಗುವುದಕ್ಕೆ ಇನ್ನೂ ಸಮಯವಿದೆ. 2022ರಲ್ಲಿ ಭಾರತದಲ್ಲಿ ಐಪಿಎಲ್​ ಆದ ನಂತರ ಅಮೇರಿಕಾ ಕ್ರಿಕೆಟ್​ ಲೀಗ್​ ಪ್ರಾರಂಭವಾಗುತ್ತದೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net