ನಟಿ ಶರ್ವಿುಳಾ ಮಾಂಡ್ರೆಗೆ ಕ್ಲೀನ್​ಚಿಟ್: ಹಾಗಾದ್ರೆ ಆರೋಪಿ ಯಾರು?

sarmila mandre
Published on

ಏ.4ರಂದು ನಡೆದ ಐಷಾರಾಮಿ ಕಾರು ಅಪಘಾತ ಪ್ರಕರಣ  ನ್ಯಾಯಾಲಯಕ್ಕೆ 33 ಪುಟಗಳ ಚಾರ್ಜ್​ಶೀಟ್ ಸಲ್ಲಿಕೆ

ಬೆಂಗಳೂರು: ಲಾಕ್​ಡೌನ್ ಜಾರಿಯಲ್ಲಿದ್ದ ಸಂದರ್ಭದಲ್ಲಿ ನಡೆದಿದ್ದ ಚಿತ್ರನಟಿ ಶರ್ವಿುಳಾ ಮಾಂಡ್ರೆ ಇದ್ದ ಐಷಾರಾಮಿ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಗ್ರೌಂಡ್ಸ್ ಸಂಚಾರ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್​ಶೀಟ್ ಸಲ್ಲಿಸಿದ್ದು, ಕಾರು ಚಾಲಕ ಡಾನ್ ಥಾಮಸ್​ನನ್ನು ಆರೋಪಿಯನ್ನಾಗಿ ಪರಿಗಣಿಸಲಾಗಿದೆ.

4ನೇ ಎಸಿಎಂಎಂ ಸಂಚಾರ ವಿಭಾಗದ ನ್ಯಾಯಾಲಯಕ್ಕೆ 33 ಪುಟಗಳ ಚಾರ್ಜ್​ಶೀಟ್ ಸಲ್ಲಿಕೆಯಾಗಿದೆ. ಸರಿಯಾಗಿ ಚಾಲನೆ ಬಾರದಿದ್ದರೂ ಥಾಮಸ್ ಅತಿವೇಗವಾಗಿ ಕಾರು ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎಂದು ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ. ಅಪಘಾತ ವೇಳೆ ಹಿಂಬದಿ ಆಸನದಲ್ಲಿ ಕುಳಿತುಕೊಂಡಿದ್ದ ನಟಿ ಶರ್ವಿುಳಾ ಗಾಯಗೊಂಡಿದ್ದರು. ಹೀಗಾಗಿ ನಟಿಯ ಹೆಸರನ್ನು ಆರೋಪ ಪಟ್ಟಿಯಿಂದ ಕೈಬಿಡಲಾಗಿದೆ. ಇವರ ಜತೆ ಕಾರಿನಲ್ಲಿದ್ದರು ಎನ್ನಲಾದ ಶಿಫಾ, ಲೋಕೇಶ್ ಕುಮಾರ್ ಮತ್ತು ನಿಖಿಲ್ ಹೆಸರನ್ನೂ ಉಲ್ಲೇಖಿಸಿಲ್ಲ. ಅಪಘಾತದ ಹೇಗೆ ನಡೆದಿದೆ ಎಂಬ ಸಂಗತಿಯನ್ನು ಮಾತ್ರ ಚಾರ್ಜ್​ಶೀಟ್​ನಲ್ಲಿ ತಿಳಿಸಲಾಗಿದೆ ಎನ್ನಲಾಗಿದೆ. ಅಪಘಾತ ಕುರಿತ ಎಫ್​ಐಆರ್​ನಲ್ಲೂ ಶರ್ವಿುಳಾ ಹೆಸರಿರಲಿಲ್ಲ.

ಏನಿದು ಪ್ರಕರಣ ?     ಲಾಕ್​ಡೌನ್ ಜಾರಿಯಲ್ಲಿದ್ದರೂ ಏ. 4ರ ಮುಂಜಾನೆ 3.45ರಲ್ಲಿ ಮನೆಯಿಂದ ಹೊರಬಂದಿದ್ದ ಶರ್ವಿುಳಾ ಮಾಂಡ್ರೆ ಮತ್ತಿತರರಿದ್ದ ಐಷಾರಾಮಿ ಕಾರು ವಸಂತನಗರದ ಮೌಂಟ್ ಕಾರ್ವೆಲ್ ಕಾಲೇಜು ಬಳಿಯ ಅಂಡರ್​ಪಾಸ್​ನಲ್ಲಿ ಅಪಘಾತಕ್ಕೀಡಾಗಿತ್ತು. ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿತ್ತು. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಪೊಲೀಸರು ಬರುವ ಮಾಹಿತಿ ತಿಳಿದು ಗಾಯಾಳುಗಳು ಪರಾರಿಯಾಗಿದ್ದರು. ನಂತರ ಅವರೆಲ್ಲರೂ ಯಶವಂತಪುರದ ಸ್ಪರ್ಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದುದು ಬೆಳಕಿಗೆ ಬಂದಿತ್ತು.

ಶರ್ವಿುಳಾ ಮಾಂಡ್ರೆ ಹೆಬ್ಬಾಳದಲ್ಲಿನ ಆಸ್ಟರ್ ಆಸ್ಪತ್ರೆಗೆ ದಾಖಲಾಗಿದ್ದರು. ಗಾಯಗೊಂಡಿದ್ದ ಅವರ ಹೇಳಿಕೆ ದಾಖಲಿಸಿಕೊಳ್ಳಲು ವೈದ್ಯರು ಅವಕಾಶ ನೀಡಿರಲಿಲ್ಲ. ಈ ಬೆಳವಣಿಗೆ ಬಳಿಕ ಪೊಲೀಸರಿಗೆ ಹೇಳಿಕೆ ನೀಡಿದ ನಟಿ, ‘ತುರ್ತಾಗಿ ಅಗತ್ಯವಿದ್ದ ಔಷಧ ತರುವ ಸಲುವಾಗಿ ಹೋಗುವಾಗ ಕಾರು ಅಪಘಾತವಾಗಿದೆ. ಆದರೆ, ಕಾರನ್ನು ತಾವು ಚಾಲನೆ ಮಾಡುತ್ತಿರಲಿಲ್ಲ’ ಎಂದಿದ್ದರು. ಅದನ್ನು ಆಧರಿಸಿ ಚಾರ್ಜ್​ಶೀಟ್​ನಲ್ಲಿ ಶರ್ವಿುಳಾ ಮತ್ತು ಇತರ ಮೂವರ ಹೆಸರನ್ನು ಕೈ ಬಿಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net