

ಬೆಂಗಳೂರು: ಕಿರುತೆರೆಯಿಂದ ಬಂದು ಬೆಳ್ಳಿತೆರೆಯಲ್ಲಿ ನೆಲೆನಿಂತ ನಟ, ನಟಿಯರು ಚಂದನವನದಲ್ಲಿ ಸಾಕಷ್ಟು ಮಂದಿ ಇದ್ದಾರೆ. ಇದೀಗ ಶರಣ್ಯಾ ಶೆಟ್ಟಿ ಆ ಸಾಲಿಗೆ ಸೇರ್ಪಡೆಯಾಗಿದ್ದಾರೆ. ಆರಂಭದಲ್ಲಿ ‘ಗಟ್ಟಿಮೇಳ’ ಧಾರಾವಾಹಿಯಲ್ಲಿ ನೆಗೆಟಿವ್ ಶೇಡ್ನಲ್ಲಿ ಮಿಂಚಿದ್ದ ಶರಣ್ಯಾ, ‘ಕ್ರೇಜಿಸ್ಟಾರ್’ ರವಿಚಂದ್ರನ್ ನಟನೆಯ ‘ರವಿ ಬೋಪಣ್ಣ’ ಚಿತ್ರದಲ್ಲಿ ಅವರ ಮಗಳಾಗಿ ಬೆಳ್ಳಿತೆರೆಗೆ ಆಗಮಿಸಿದ್ದರು. ಇದೀಗ ಆ ಚಿತ್ರಕ್ಕೂ ಮುನ್ನ ಪ್ರಿಯಾಂಕಾ ಉಪೇಂದ್ರ ಜತೆಗೆ ನಟಿಸಿರುವ ‘1980’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. 80ರ ಕಾಲಘಟ್ಟದಲ್ಲಿ ನಡೆಯುವ ‘1980’ ಚಿತ್ರದಲ್ಲಿ ತುಂಟತನ ಇರುವ, ಕೀಟಲೆ ಮಾಡುವ ಹುಡುಗಿಯ ಪಾತ್ರವನ್ನು ಶರಣ್ಯಾ ನಿಭಾಯಿಸಿದ್ದಾರೆ. ಈವರೆಗೂ ಗಂಭೀರ ರೀತಿಯ ಪಾತ್ರವನ್ನು ಮಾಡಿದ್ದ ಅವರಿಗೆ ಈ ಪಾತ್ರ ಕೊಂಚ ಚಾಲೆಂಜಿಂಗ್ ಅನಿಸಿತಂತೆ.
‘ಈ ಚಿತ್ರದಲ್ಲಿ ಟೀನೇಜ್ ಹುಡುಗಿಯ ಪಾತ್ರ. ಬಜಾರಿ ಹುಡುಗಿ ಎನ್ನಬಹುದು. ಈವರೆಗೂ ಈ ರೀತಿಯ ಪಾತ್ರವನ್ನು ನಾನು ಮಾಡಿಲ್ಲ. ಹಾಗಾಗಿಯೇ ಸವಾಲೆನಿಸಿತು’ ಎಂಬುದು ಶರಣ್ಯಾ ಮಾತು. ‘14 ಫೆಬ್’, ‘31ಡೇಸ್’ ಇದೀಗ ‘1980’ ಇವೆಲ್ಲ ನಟಿ ಶರಣ್ಯಾ ಶೆಟ್ಟಿ ನಟನೆಯ ಸಿನಿಮಾಗಳು. ಅಷ್ಟಕ್ಕೂ ಶರಣ್ಯಾ ಆಯ್ದುಕೊಳ್ಳುವುದು ನಂಬರ್ಸ್ ಶೀರ್ಷಿಕೆಯ ಚಿತ್ರಗಳನ್ನಷ್ಟೇನಾ? ಹೀಗೊಂದು ಪ್ರಶ್ನೆ ಮೂಡಿದರೂ, ಅದು ಕಾಕತಾಳೀಯ ಎನ್ನುತ್ತಾರವರು. ನೃತ್ಯಗಾರ್ತಿಯಾಗಿ, ಮಾಡೆಲಿಂಗ್, ಜಾಹೀರಾತು ಕ್ಷೇತ್ರದಲ್ಲಿಯೂ ಕೆಲಸ ಮಾಡಿದ್ದಾರೆ. ಧಾರಾವಾಹಿ ಯಲ್ಲಿಯೂ ನಟಿಸಿ ಸಿನಿಮಾ ಕ್ಷೇತ್ರದಲ್ಲಿಯೇ ನೆಲೆ ನಿಲ್ಲುವ ಬಯಕೆ ಶರಣ್ಯಾ ಅವರದ್ದು.