

ಬೆಂಗಳೂರು: ಇದೇ ತಿಂಗಳ 24ರಂದು ವರನಟ ಡಾ.ರಾಜಕುಮಾರ್ ಜಯಂತಿ. ಈ ಬಾರಿಯ ಜಯಂತಿಯ ಸಮಯದಲ್ಲಿಯೇ ರಾಜಕುಮಾರ್ ಇಬ್ಬರು ಮೊಮ್ಮಕ್ಕಳ ಸಿನಿಮಾ ತೆರೆ ಮೇಲೆ ಬರುತ್ತಿರುವುದು ವಿಶೇಷ. ಮೊಮ್ಮಗಳು ನಿವೇದಿತಾ ಶಿವರಾಜಕುಮಾರ್ ನಿರ್ಮಾಣದ ಫೈರ್ ಫ್ಲೈ ಚಿತ್ರವು ರಾಜ್ ಹುಟ್ಟುಹಬ್ಬದಂದು ತೆರೆ ಕಾಣುತ್ತಿದ್ದರೆ, ಇನ್ನೋರ್ವ ದೊಡ್ಮನೆ ಕುಡಿ ಷಣ್ಮುಖ ಗೋವಿಂದರಾಜು ಅಭಿಯನದ ಹಾಗೂ ಅಶೋಕ್ ಕಡಬ ನಿರ್ದೇಶನದ ‘ನಿಂಬಿಯಾ ಬನಾದ ಮ್ಯಾಗ: ಪೇಜ್-1’ ನಾಳೆ (ಏ.4) ರಿಲೀಸ್ ಆಗುತ್ತಿದೆ. ಎರಡು ಭಾಗಗಳಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಮಲೆನಾಡಿನ ಭಾಗದ ಕಥಾಹಂದರ ಇರುವ ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ದೊಡ್ಡಮನೆ ಕುಟುಂಬದ ಲಕ್ಷ್ಮೀ, ಗೋವಿಂದರಾಜು ದಂಪತಿ, ಹಿರಿಯ ನಿರ್ಮಾಪಕ ಎಸ್.ಎ.ಚಿನ್ನೇಗೌಡ, ಪೂರ್ಣಿಮಾ ರಾಮ್‌ಕುಮಾರ್ ಹಾಗೂ ಚಿತ್ರತಂಡದವರು ಇದ್ದರು. ನಾಯಕ ಷಣ್ಮುಖ, ‘ಇದು ನನ್ನ ಮೊದಲ ಸಿನಿಮಾ. ಮಲೆನಾಡಿನ ಮಡಿಲಲ್ಲಿ ನಡೆಯುವ ಸುಂದರ ಕಾವ್ಯ. ಅಮ್ಮ-ಮಗನ ಬಾಂಧ್ಯವದ ಕಥೆಯಿದು. ಈ ಚಿತ್ರಕ್ಕೆ ಕುಟುಂಬದ ಎಲ್ಲರೂ ಶುಭ ಕೋರಿದ್ದಾರೆ’ ಎಂದು ಖುಷಿಹಂಚಿಕೊಂಡರು. ಅಶೋಕ್ ಕಡಬ, ‘ಮಲೆನಾಡಿನ ಬೆಂಗಾಡಿಯ ಮೇಲ್‌ಬೈಲ್ ದೊಡ್ಮನೆಯ ನಾಲ್ಕು ವರ್ಷದ ಮಗು (ಅಚ್ಚಣ್ಣ) ಕಾಣೆಯಾಗಿದ್ದಾನೆ. ಮಗುವಿನ ಬರುವಿಕೆಗಾಗಿ ತಾಯಿ ಕಾದು ಕುಳಿತಿದ್ದಾಳೆ. 25 ವರ್ಷಗಳ ನಂತರ ಅಚ್ಚಣ್ಣ ಊರಿಗೆ ಮರಳಿದ್ದಾನೆ. ಮುಂದೇನು ಎಂಬುದು ಚಿತ್ರದ ಕಥೆ. ಇದು ಮೊದಲನೇ ಭಾಗ. ಇನ್ನು ಎರಡನೇ ಭಾಗವೂ ಬರಲಿದೆ’ ಎಂದು ಮಾಹಿತಿ ನೀಡಿದರು. ಇಲ್ಲಿ ಷಣ್ಮುಖಗೆ ತನುಶ್ರೀ ನಾಯಕಿಯಾಗಿದ್ದಾರೆ. ‘ಮೇಘಮಾಲೆ’ ಖ್ಯಾತಿಯ ಸುನಾದ್ ರಾಜ್ ಕಲಾ ಬಳಗದಲ್ಲಿದ್ದಾರೆ. ಆರೋನ್ ಕಾರ್ತಿಕ್ ಸಂಗೀತ, ಸಿದ್ದು ಕಾಂಚನಹಳ್ಳಿ ಛಾಯಾಗ್ರಹಣ ಚಿತ್ರಕ್ಕಿದೆ.