ದ್ವಿತೀಯ ಹಂತದ ಶೂಟಿಂಗ್ ಮುಗಿಸಿದ 'ಶಂಭೋ ಶಿವ ಶಂಕರ'ನಿಗೆ ಮಾಸಾಂತ್ಯದಲ್ಲಿ ಹಾಡಿನ ಚಿತ್ರೀಕರಣ

WhatsApp Image 2021-01-16 at 8.35.27 AM
Published on

ಬೆಂಗಳೂರು: ಅಘನ್ಯ ಪಿಕ್ಚರ್ಸ್ ಲಾಂಛನದಲ್ಲಿ ವರ್ತೂರ್ ಮಂಜು ನಿರ್ಮಿಸುತ್ತಿರುವ 'ಶಂಭೋ ಶಿವ ಶಂಕರ' ಚಿತ್ರದ ದ್ವಿತೀಯ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರಿನಲ್ಲೇ 26 ದಿನಗಳ ಚಿತ್ರೀಕರಣ ನಡೆದಿದೆ.

ಹಿರಿಯ ನಟ ಶಶಿಕುಮಾರ್, ನಾಯಕರಾದ ಅಭಯ್ ಪುನೀತ್, ರೋಹಿತ್, ರಕ್ಷಕ್, ನಾಯಕಿ ಸೋನಲ್ ಮೊಂತೆರೋ, ಜೋಗಿ ನಾಗರಾಜ್, ಪ್ರದೀಪ್ ಟಿಪ್ಟೂರ್, ಆಶಾ ಸುಜಯ್, ಪ್ರೇಮಾ, ರೋಹಿಣಿ, ಸಂಗಮೇಶ್ ಕಲಾವಿದರು ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.

ಮಾಸಾಂತ್ಯಕ್ಕೆ ಹಾಡಿನ ಚಿತ್ರೀಕರಣ ನಡೆಯಲಿದ್ದು, ಅದಕ್ಕಾಗಿ ಅದ್ದೂರಿ ಸೆಟ್ ಸಹ ನಿರ್ಮಾಣವಾಗುತ್ತಿದೆ. ಶಂಕರ್ ಕೋನಮಾನಹಳ್ಳಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕಿರುತೆರೆಯಲ್ಲಿ ಜನಪ್ರಿಯ ಧಾರಾವಾಹಿಗಳನ್ನು ನಿರ್ದೇಶಿಸಿರುವ ಶಂಕರ್ ಅವರಿಗೆ ಬೆಳ್ಳಿತೆರೆಯಲ್ಲಿ ಇದು ಮೊದಲ ಚಿತ್ರ.

ಕಥೆ, ಚಿತ್ರಕಥೆ, ಸಂಭಾಷಣೆಯನ್ನು ನಿರ್ದೇಶಕರೇ ಬರೆದಿದ್ದಾರೆ. ಗೌಸ್ ಫೀರ್ ಹಾಗೂ ಹಿತನ್ ಹಾಸನ್ ಹಾಡುಗಳನ್ನು ಬರೆದಿದ್ದು, ಹಿತನ್ ಹಾಸನ್ ಸಂಗೀತ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ನಟರಾಜ್ ಮುದ್ದಾಲ ಛಾಯಾಗ್ರಹಣ, ಕಲೈ ನೃತ್ಯ ನಿರ್ದೇಶನ ಹಾಗೂ ವೆಂಕಟೇಶ್ ಯುಡಿವಿ ಅವರ ಸಂಕಲನ ಈ ಚಿತ್ರಕ್ಕಿದೆ. 'ಶಂಭೋ ಶಿವ ಶಂಕರ' ಮೂರು ನಾಯಕ ಪಾತ್ರಗಳ ಹೆಸರಾಗಿದ್ದು, ಅಭಯ್ ಪುನೀತ್, ರೋಹಿತ್ ಹಾಗೂ ರಕ್ಷಕ್ ಈ ಮೂರು ಪಾತ್ರಗಳಲ್ಲಿ ಕಾಣಿಸಿಕೊಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net