ಧ್ರುವ ಸರ್ಜಾ ಪೊಗರು v/s ಪ್ರಜ್ವಲ್ ದೇವರಾಜ್​ ವಿಕ್ರಂ

Pogaru
Published on

ಬೆಂಗಳೂರು: ಲಾಕ್​ಡೌನ್ ನಂತರ ಕನ್ನಡದಲ್ಲಿ ಬಿಗ್ ಬಜೆಟ್ ಚಿತ್ರಗಳ ಮೆರವಣಿಗೆ ಧ್ರುವ ಸರ್ಜಾ ಅಭಿನಯದ ‘ಪೊಗರು’ ಚಿತ್ರದಿಂದ ಶುರುವಾಗಲಿದೆ ಎಂದು ಕಳೆದ ವರ್ಷದ ಕೊನೆಯಲ್ಲಿ ಹೇಳಲಾಗಿತ್ತು. ಅದಕ್ಕೆ ಸರಿಯಾಗಿ ಜನವರಿ ಮೊದಲ ಅಥವಾ ಎರಡನೆಯ ವಾರದಲ್ಲಿ ‘ಪೊಗರು’ ಬಿಡುಗಡೆ ಎಂದು ಹೇಳಲಾಯ್ತು. ಆ ನಂತರ ಫೆಬ್ರವರಿ ಮೊದಲ ಅಥವಾ ಎರಡನೇ ವಾರ ಎಂದು ಸುದ್ದಿಯಾಯ್ತು. ಇದೀಗ ಏಪ್ರಿಲ್​ನಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಕಳೆದ ಎರಡು ದಿನಗಳಲ್ಲಿ ‘ಪೊಗರು’ ಚಿತ್ರದ ‘ಏಪ್ರಿಲ್​ನಲ್ಲಿ ಬಿಡುಗಡೆ’ ಎಂಬ ಹೊಸ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದ್ದು, ಚಿತ್ರ ಮುಂದಕ್ಕೆ ಹೋಗಿರುವ ಕುರಿತು ಧ್ರುವ ಅಭಿಮಾನಿಗಳಲ್ಲಿ ನಿರಾಸೆ ಮನೆಮಾಡಿದೆ. ಆದರೆ, ನಿರ್ವಪಕ ಗಂಗಾಧರ್ ಮಾತ್ರ ಚಿತ್ರ ಫೆಬ್ರವರಿಯಲ್ಲೇ ಬಿಡುಗಡೆಯಾಗುತ್ತದೆ ಎನ್ನುತ್ತಾರೆ. ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ಅವರು, ‘ಚಿತ್ರದ ಪೋಸ್ಟ್​ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. 2-3 ದಿನಗಳಲ್ಲಿ ಚಿತ್ರದ ಬಿಡುಗಡೆಯ ದಿನಾಂಕವನ್ನು ಘೋಷಿಸುತ್ತೇವೆ. ಫೆಬ್ರವರಿ 12ಕ್ಕೆ ಅಥವಾ 19ಕ್ಕೆ ಚಿತ್ರ ಮೂರು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುವುದು ನಿಶ್ಚಿತ’ ಎನ್ನುತ್ತಾರೆ.

ಈ ಮಧ್ಯೆ, ಪ್ರಜ್ವಲ್ ಅಭಿನಯದ ‘ಇನ್​ಸ್ಪೆಕ್ಟರ್ ವಿಕ್ರಮ್ ಚಿತ್ರವು ಫೆಬ್ರವರಿ 12ಕ್ಕೆ ಬಿಡುಗಡೆಯಾಗಲಿದ್ದು, ಲಾಕ್​ಡೌನ್ ನಂತರ ಬಿಡುಗಡೆಯಾಗುತ್ತಿರುವ ಮೊದಲ ಸ್ಟಾರ್ ಚಿತ್ರ ತಮ್ಮದೇ ಎನ್ನುತ್ತಾರೆ ಆ ಚಿತ್ರದ ನಿರ್ವಪಕ ವಿಖ್ಯಾತ್. ‘ಚಿತ್ರದಲ್ಲಿ ಪ್ರಜ್ವಲ್ ಜತೆಗೆ ದರ್ಶನ್ ಸಹ ಅಭಿನಯಿಸಿದ್ದಾರೆ. ದರ್ಶನ್ ಅಭಿನಯದ ಚಿತ್ರವೊಂದು ಬಿಡುಗಡೆಯಾಗದೆ ಒಂದೂವರೆ ವರ್ಷಗಳೇ ಆಗಿವೆ. ಹಾಗಾಗಿ ಲಾಕ್​ಡೌನ್ ನಂತರ ಬಿಡುಗಡೆಯಾಗುತ್ತಿರುವ ಮೊದಲ ಚಿತ್ರ ‘ಇನ್​ಸ್ಪೆಕ್ಟರ್ ವಿಕ್ರಂ’ ಆಗಲಿದೆ’ ಎನ್ನುತ್ತಾರೆ ವಿಖ್ಯಾತ್. ಇದಲ್ಲದೆ, ಅಜೇಯ್ ರಾವ್ ಅಭಿನಯದ ‘ಕೃಷ್ಣ ಟಾಕೀಸ್’ ಸಹ ಫೆಬ್ರವರಿ ತಿಂಗಳಲ್ಲೇ ಬಿಡುಗಡೆ ಆಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net