

ಲಾಕ್‌ಡೌನ್ ಸಡಿಲವಾಗುತ್ತಿದ್ದಂತೆಯೇ ಚಿತ್ರೀಕರಣ ಪ್ರಾರಂಭಿಸಬೇಕು ಎಂಬ ಬೇಡಿಕೆ ಬಾಲಿವುಡ್ ಸೇರಿದಂತೆ ಎಲ್ಲಾ ಚಿತ್ರರಂಗಗಳಿಂದಲೂ ಕೇಳಿ ಬರುತ್ತಿವೆ. ಈಗಾಗಲೇ ತೆಲಂಗಾಣ ಸರ್ಕಾರವು ಆ ರಾಜ್ಯದಲ್ಲಿ ಚಿತ್ರೀಕರಣ ಪ್ರಾರಂಭಿಸುವುದಕ್ಕೆ ಅನುಮತಿ ನೀಡಿದ್ದು, ಈ ಬಗ್ಗೆ ಬೇರೆ ರಾಜ್ಯಗಳು ಸಹ ಚಿಂತನೆ ನಡೆಸಿವೆ.
ಈ ಮಧ್ಯೆ, ಬಾಲಿವುಡ್‌ನ ಹಿರಿಯ ನಟ ಶಕ್ತಿ ಕಪೂರ್ ಅವರು, ಒಂದೊಮ್ಮೆ ಚಿತ್ರೀಕರಣ ಪ್ರಾರಂಭವಾದರೆ ತಾನೂ ಭಾಗವಹಿಸುವುದಿಲ್ಲ ಮತ್ತು ತನ್ನ ಮಗಳನ್ನು ಸಹ ಭಾಗವಹಿಸುವುದಕ್ಕೆ ಬಿಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಇತ್ತೀಚೆಗೆ ಮಾತನಾಡಿರುವ ಅವರು, ‘ಸದ್ಯಕ್ಕೆ ಭಯದ ವಾತಾವರಣ ಇನ್ನೂ ಕಡಿಮೆಯಾಗಿಲ್ಲ. ನನ್ನ ಪ್ರಕಾರ, ಇದಿನ್ನೂ ಆರಂಭ ಅಷ್ಟೇ. ಕೆಟ್ಟದ್ದಿನ್ನೂ ಮುಂದಿನ ದಿನಗಳಲ್ಲಿ ಬರಬೇಕಿದೆ. ಹಾಗಾಗಿ, ನಾನು ನನ್ನ ಮಕ್ಕಳನ್ನು ಕೆಲಸ ಮಾಡುವುದಕ್ಕೆ ಬಿಡುವುದಿಲ್ಲ. ಕೆಲಸ ಎಷ್ಟು ಮುಖ್ಯ ಅಂತ ನನಗೆ ಚೆನ್ನಾಗಿ ಗೊತ್ತಿದೆ. ಹಾಗಂತ ನಮ್ಮನ್ನ ನಾವೇ ಪಣಕ್ಕಿಟ್ಟು, ಕೆಲಸ ಮಾಡುವುದು ಎಷ್ಟು ಸರಿ? ಇಂತಹ ಸಂದರ್ಭಗಳಲ್ಲಿ ಚಿತ್ರೀಕರಣ ಪ್ರಾರಂಭವಾದರೆ ಅಲ್ಲೋಲಕಲ್ಲೋಲವಾಗುತ್ತದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಎಲ್ಲರಿಗೂ ಬಹಳ ಜಾಗ್ರತೆಯಿಂದ ಇರಿ ಎಂದು ಸಲಹೆ ನೀಡುವ ಶಕ್ತಿ ಕಪೂರ್, ‘ಸುಮ್ಮನೆ ಹೊರಗೆ ಹೋಗಿ ಆಸ್ಪತ್ರೆ ಬಿಲ್ ಕಟ್ಟುವುದಕ್ಕಿಂತ, ಮನೆಯಲ್ಲಿರುವುದು ಬಹಳ ಉತ್ತಮ. ಹೊರಗಡೆ ಬಹಳ ಕಷ್ಟ ಇದೆ. ಹಾಗಾಗಿ ಎಲ್ಲವೂ ಒಂದು ತಹಬದಿಗೆ ಬರುವ ತನಕ ಸುಮ್ಮನಿರಿ’ ಎಂದು ಚಿತ್ರೀಕರಣ ಪ್ರಾರಂಭಿಸುವುದಕ್ಕೆ ಹೊರಟಿರುವವರಿಗೆ ಅವರು ಸಲಹೆ ಕೊಡುತ್ತಾರೆ.
ಅಂದ ಹಾಗೆ, ಶ್ರದ್ಧಾ ಕಪೂರ್ ಅಭಿನಯದ ‘ಭಾಗಿ 3’ ಚಿತ್ರವು ಲಾಕ್‌ಡೌನ್ ಶುರುವಾಗುವುದಕ್ಕಿಂತ ಮುನ್ನವೇ ಬಿಡುಗಡೆಯಾಗಿದೆ. ಇನ್ನು, ರಣಬೀರ್ ಕಪೂರ್ ಅಭಿನಯದ ಹೊಸ ಚಿತ್ರವೊಂದನ್ನು ಶ್ರದ್ಧಾ ಒಪ್ಪಿಕೊಂಡಿದ್ದು, ಅದಿನ್ನೂ ಪ್ರಾರಂಭವಾಗಬೇಕಿದೆ.