ಜ್ಯೂನಿಯರ್ ಐಶ್ವರ್ಯಾಗೆ ಹೀರೋಯಿನ್​ ಆಗೋ ಅವಕಾಶ ಸಿಗ್ತು!

Aishwarya Rai - Final
Published on

ಕೆಲವೇ ದಿನಗಳ ಹಿಂದಿನ ಮಾತು. ಸೋಷಿಯಲ್​ ಮೀಡಿಯಾದಲ್ಲಿ ಒಂದು ವಿಡಿಯೋ ಹರಿದಾಡುತ್ತಿತ್ತು. ಈ ವಿಡಿಯೋದಲ್ಲಿ ಐಶ್ವರ್ಯಾ ರೈ ತರಹವೇ ಕಾಣುವ ಅಮೃತಾ ಎನ್ನುವ ಯುವತಿ, ಐಶ್ವರ್ಯಾ ರೈ ತರಹ ನಟನೆ ಮಾಡಿ ಎಲ್ಲರಿಂದ ಸೈ ಎನಿಸಿಕೊಂಡಿದ್ದರು. ಈಗ ಈ ವಿಡಿಯೋದಿಂದಲೇ ಈ ಜ್ಯೂನಿಯರ್​ ಐಶ್ವರ್ಯಾಗೆ ಒಂದು ಚಿತ್ರದಲ್ಲಿ ಹೀರೋಯಿನ್​ ಆಗಿ ನಟಿಸುವ ಅವಕಾಶ ಸಿಕ್ಕಿದೆ.

ಆಶ್ಚರ್ಯವಾದರೂ ಇದು ನಿಜ. ಐಶ್ವರ್ಯಾ ತರಹವೇ ಕಾಣುವ ಅಮೃತಾ, ‘ಕಂಡುಕೊಂಡೇನ್ ಕಂಡುಕೊಂಡೇನ್’ ಚಿತ್ರದ ಒಂದು ಸಂಭಾಷಣೆಗೆ ಲಿಪ್ ಸಿಂಕ್ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಆಕೆಯ ಎಕ್ಸ್‌ಪ್ರೆಶನ್, ಕಣ್ಣುಗಳು ಮತ್ತು ಸಂಭಾಷಣೆ ಹೇಳುವ ಶೈಲಿಗೆ ನೆಟ್ಟಿಗರು ಬಹುಪರಾಕ್ ಹೇಳಿದ್ದರು. ಆಕೆಯ ಪ್ರತಿಭೆಯನ್ನು ನೋಡಿ, ಇದೀಗ ಮಲಯಾಳಂ ಚಿತ್ರರಂಗದಿಂದ ಆಕೆಗೆ ಆಫರ್​ ಹೋಗಿದೆ.

ಹೌದು, ಪಿಕಾಸೋ ಎಂಬ ಮಲಯಾಳಂ ಚಿತ್ರ ಈ ವರ್ಷದ ಆರಂಭದಲ್ಲಿ ಸೆಟ್ಟೇರಿತ್ತು. ಆದರೆ, ಲಾಕ್​ಡೌನ್​ನಿಂದಾಗಿ, ಈ ಚಿತ್ರದ ಚಿತ್ರೀಕರಣ ಮುಂದುವರೆದಿರಲಿಲ್ಲ. ಶೇಖ್​ ಅಫ್ಸಲ್​ ನಿರ್ಮಾಣದ ಮತ್ತು ಸುನೀಲ್​ ಕರಿಯಟ್ಟುಕಾರಾ ನಿರ್ದೇಶನದ ಈ ಚಿತ್ರಕ್ಕೆ ಇದೀಗ ಅಮೃತಾ, ನಾಯಕಿಯಾಗಿ ಆಯ್ಕೆಯಾಗಿದ್ದು, ಲಾಕ್​ಡೌನ್​ ಮುಗಿಯುತ್ತಿದ್ದಂತೆಯೇ ಚಿತ್ರೀಕರಣ ಪ್ರಾರಂಭವಾಗಲಿದೆ.

ಟಿಕ್​ಟಾಕ್​ನಲ್ಲಿ ಜ್ಯೂನಿಯರ್​ ಐಶ್ವರ್ಯಾ ರೈ ಎಂದೇ ಪ್ರಸಿದ್ಧರಾಗಿರುವ ಅಮೃತಾ, ಕೆಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದರಂತೆ. ಒಂದೆರೆಡು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಿಗೂ ಬಂದು ಹೋಗಿದ್ದರಂತೆ. ಆದರೆ, ಆಕೆ ಅಷ್ಟೇನೂ ಜನಪ್ರಿಯವಾಗಿರಲಿಲ್ಲ. ಯಾವಾಗ ಅಮೃತಾ. ಐಶ್ವಯಾರ್ ತರಹ ಟಿಕ್​ಟಾಕ್​ನಲ್ಲಿ ನಟನೆ ಮಾಡಿದರೋ, ಅಲ್ಲಿಂದ ಅವರಿಗೆ ತಮಿಳು ಮತ್ತು ಮಲಯಾಳಂ ಚಿತ್ರರಂಗಗಳಿಂದ ಹಲವು ಅವಕಾಶಗಳು ಒಲಿದು ಬರುತ್ತಿದೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net