ಹೇಗಿದೆ ಶಾರುಖ್​ ಖಾನ್​ ಅಭಿನಯದ 'ಡಂಕಿ' ಚಿತ್ರದ ಟ್ರೇಲರ್​ ? ಚಿತ್ರದ ಕಥೆಯೇನು ಗೊತ್ತಾ?

Dunki
Published on

‘ಪಠಾಣ್’ ಮತ್ತು ‘ಜವಾನ್’ ಚಿತ್ರಗಳ ಮೂಲಕ ಈ ವರ್ಷ ಎರಡು ಬಾರಿ ಸಾವಿರ ಕೋಟಿ ರೂ. ಗಳಿಕೆ ಮಾಡಿಕೊಂಡು ದಾಖಲೆ ಬರೆದಿರುವ ಬಾಲಿವುಡ್ ನಟ ಶಾರಖ್ ಖಾನ್, ಇದೀಗ ಹ್ಯಾಟ್ರಿಕ್ ಹೊಸ್ತಿಲಲ್ಲಿದ್ದಾರೆ. ಅವರು ನಟಿಸಿರುವ ವಿಭಿನ್ನ ಕಥಾಹಂದರದ ಸಿನಿಮಾ ‘ಡಂಕಿ’ ಸಿನಿಮಾ ಇದೇ ತಿಂಗಳ 21ರಂದು ತೆರೆಗೆ ಬರಲು ರೆಡಿಯಿದೆ. ‘ಮುನ್ನಭಾಯ್ ಎಂಬಿಬಿಎಸ್’, ‘ಪಿಕೆ’, ‘3 ಈಡಿಯಟ್ಸ್’, ‘ಸಂಜು’ ಖ್ಯಾತಿಯ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಆ್ಯಕ್ಷನ್-ಕಟ್ ಹೇಳಿರುವ ಚಿತ್ರವಿದು.

ಶಾರುಖ್ ಖಾನ್‌ಗೆ ತಾಪ್ಸೀ ಪನ್ನು ನಾಯಕಿಯಾಗಿದ್ದು, ವಿಕ್ಕಿ ಕೌಶಲ್, ಅನಿಲ್ ಗ್ರೋವರ್, ಬೊಮನ್ ಇರಾನಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಕೆನಡಾ, ಅಮೆರಿಕಾ, ಇಂಗ್ಲೆಂಡ್‌ಗೆ ಭಾರತದಿಂದ ಹೋಗುವ ಐವರು ಅಕ್ರಮ ವಲಸಿಗರ ಹೋರಾಟಗಳ ಸುತ್ತ ಚಿತ್ರದ ಕಥೆ ಸಾಗುತ್ತದೆ. 1995ರಿಂದ 2020ರವರೆಗಿನ 25 ವರ್ಷಗಳ ಅವಧಿಯಲ್ಲಿ ಕಥೆ ಸಾಗುತ್ತದೆ. ಈಗಾಗಲೇ ಡ್ರಾಪ್ 1, 2, 3 ಮೂಲಕ ಟೀಸರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಿದ್ದ ಚಿತ್ರತಂಡ ಮಂಗಳವಾರ ಡ್ರಾಪ್ 4 ಎಂದು ಟ್ರೇಲರ್ ರಿಲೀಸ್ ಮಾಡಿದೆ.

ಟ್ರೇಲರ್​ ನೋಡಿದರೆ 'ಡಂಕಿ' ಚಿತ್ರ ಐವರು ಗೆಳೆಯರ ಸುತ್ತ ಸಾಗುತ್ತದೆ ಎಂಬುದು ಗೊತ್ತಾಗುತ್ತದೆ. ಹೊರ ದೇಶಕ್ಕೆ ಹೋಗಿ ಜೀವನ ಕಟ್ಟಿಕೊಳ್ಳಲು ಅವರು ಹೇಗೆಲ್ಲಾ ಕಷ್ಟಪಡುತ್ತಾರೆ ಎಂಬುದು ಚಿತ್ರದ ಹೈಲೈಟ್​ ಆಗಿರಲಿದೆ. ಅಕ್ರಮವಾಗಿ ಇಂಗ್ಲೆಂಡ್​ ಹೋಗುವ ಅವರು ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂಬುದರ ಅನಾವರಣವೂ ಟ್ರೇಲರ್​ನಲ್ಲಿ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net