ಶಾರೂಖ್​ ಖಾನ್​ರ 30 ವರ್ಷಗಳ ಕನಸು ಈಗ ನನಸಾಯಿತಂತೆ … ಏನದು?

Shahrukh Khan - Pathaan
Published on

ಮುಂಬೈ: ಬಾಲಿವುಡ್​ನ 'ಕಿಂಗ್​ ಖಾನ್​' ಶಾರೂಖ್​ ಖಾನ್ ಇದುವರೆಗೂ ಹಲವು ತರಹದ ಸಿನಿಮಾಗಳನ್ನು ಮಾಡಿದ್ದಾರೆ. ಆದರೆ, ಔಟ್​ ಅಂಡ್​ ಔಟ್​ ಆಕ್ಷನ್​ ಚಿತ್ರಗಳನ್ನು ಮಾಡಿರಲಿಲ್ಲ. ಈಗ 'ಪಠಾಣ್​' ಚಿತ್ರದ ಊಲಕ ತಮ್ಮ ಆಸೆ ಈಡೇರಿಸಿಕೊಂಡಿರುವುದಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ 'ಮಿಷನ್​ ಇಂಪಾಸಿಬಲ್​' ತರಹದ ಹೆವಿ ವೋಲ್ಟೇಜ್​ ಆಕ್ಷನ್​ ಚಿತ್ರಗಳಲ್ಲಿ ನಟಿಸುವುದಕ್ಕೆ ಆಸೆ ವ್ಯಕ್ತಪಡಿಸಿದ್ದಾರೆ.

ಸೌದಿ ಆರೇಬಿಯಾದಲ್ಲಿ ನಡೆಯುತ್ತಿರುವ ರೆಡ್​ ಸೀ ಫೆಸ್ಟಿವಲ್​ನಲ್ಲಿ ಆಯೋಜಿಸಲಾಗಿದ್ದ 'ದಿಲ್​ವಾಲೆ ದುಲ್ಹನಿಯಾ ಲೇ ಜಾಯೇಂಗೇ' ಚಿತ್ರದ ವಿಶೇಷ ಪ್ರದರ್ಶನದಲ್ಲಿ ಭಾಗವಹಿಸಿ ಶಾರೂಖ್​ ಮಾತಾಡುತ್ತಿದ್ದರು. ತಮಗೆ ಆಕ್ಷನ್​ ಚಿತ್ರಗಳಲ್ಲಿ ನಟಿಸುವ ಆಸೆ ಇದೆ ಎಂದು ಹೇಳಿಕೊಂಡರು.

'ನಾನು ಜೀವನದಲ್ಲಿ ಆಕ್ಷನ್​ ಚಿತ್ರಗಳನ್ನೇ ಮಾಡಿಲ್ಲ. ಸಾಕಷ್ಟು ಪ್ರೇಮಮಕಥೆಗಳು, ಸಾಮಾಜಿಕ ಕಥೆಗಳಲ್ಲಿ ಕಾಣಿಸಿಕೊಂಡಿದ್ದೇನೆ. ನೆಗೆಟಿವ್​ ಪಾತ್ರಗಳನ್ನು ಮಾಡಿದ್ದೇನೆ. ಆದರೆ, ಆಕ್ಷನ್​ ಚಿತ್ರಗಳನ್ನು ಮಾಡಿಲ್ಲ. ಅದ್ಯಾಕೋ ಏನೋ, ನನ್ನನ್ನು ಆಕ್ಷನ್​ ಚಿತ್ರಗಳಿಗೆ ಯಾರೂ ಪರಿಗಣಿಸಲೇ ಇಲ್ಲ' ಎಂದು ಶಾರೂಖ್​ ಖಾನ್​ ಹೇಳಿಕೊಂಡಿದ್ದಾರೆ.

ಆಕ್ಷನ್​ ಚಿತ್ರಗಳಲ್ಲಿ ನಟಿಸುವುದು ಶಾರೂಖ್​ ಅವರ 30 ವರ್ಷಗಳ ಕನಸಂತೆ. 'ನನಗೆ ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದಕ್ಕೆ ಬಹಳ ಇಷ್ಟ. ಮುಂಬೈಗೆ ಬಂದಾಗ ಆಕ್ಷನ್​ ಚಿತ್ರಗಳಲ್ಲಿ ನಟಿಸುವ ಆಸೆ ಇತ್ತು. ಆದರೆ, ಈ ಆಸೆ ಇದುವರೆಗೂ ಈಡೇರಿಲ್ಲ. 'ಪಠಾಣ್​' ಚಿತ್ರದ ಮೂಲಕ ನನ್ನ ಆಸೆ ಈಡೇರಿದೆ' ಎಂದು ಶಾರೂಖ್​ ಖಾನ್​ ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಇನ್ನಷ್ಟು ಆಕ್ಷನ್​ ಚಿತ್ರಗಳಲ್ಲಿ ನಟಿಸುವಾಸೆ ಇದೆ ಎಂದು ಹೇಳಿಕೊಂಡಿರುವ ಅವರು, 'ನನಗೀಗ 57 ವರ್ಷ. ಮುಂದಿನ ದಿನಗಳಲ್ಲಿ ಇನ್ನಷ್ಟು ಆಕ್ಷನ್​ ಚಿತ್ರಗಳನ್ನು ಮಾಡುವಾಸೆ. ಅದರಲ್ಲೂ 'ಮಿಷನ್​ ಇಂಪಾಸಿಬಲ್​' ತರಹದ ಚಿತ್ರಗಳಲ್ಲಿ ನಟಿಸುವಾಸೆ' ಎಂದು ಶಾರೂಖ್​ ತಮ್ಮಾಸೆ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net